![]() | ಕನ್ನಡ ಚರ್ಚಾ ಕೂಟ |
ವರದಿ - ಶ್ರೀಮತಿ. ವೀಣಾ ಸುದರ್ಶನ್
ಕನ್ನಡ ಭಾಷೆಯ ಶೋಚನೀಯ ಸ್ಥಿತಿ-ಗತಿ ವಿಚಾರ ವಿನಿಮಯ ಕಾರ್ಯಕ್ರಮ
ಆಸ್ಟ್ರೇಲಿಯಾ ಸಿಡ್ನಿಯಲ್ಲಿ ಭಾನುವಾರದ ಚಳಿಯಸಂಜೆಯಲ್ಲೊಂದು ಕನ್ನಡ ಬಾಷೆಯ ಸ್ಥಿತಿ ಗತಿಯ ವಿಚಾರ ವಿನಿಮಯ ಕಾರ್ಯಕ್ರಮ. ಇದೇನು ಎತ್ತಣಿನ್ದೆತ್ತ ಸಂಬಂಧವಯ್ಯಾ ಅಂತೀರಾ? ಭಾರತದಲ್ಲೇ ತನ್ನ ಶಾಸ್ತ್ರೀಯ ಸ್ಥಾನಮಾನಕ್ಕೆ ಕಷ್ಟಪಡುತ್ತಿರುವಾಗ, ಈ ಸಿಡ್ನಿಯವರಿಗ್ಯಾಕೆ ಕನ್ನಡದ ಉಸಾಬರಿ ಅಂತಾ ಆಶ್ಚರ್ಯಪಡಬೇಕಾಗಿಲ್ಲ.ಯಾಕಂದ್ರೆ ೧೫ವರ್ಷದಿ೦ದೀಚೆಗೆ ಸಿಡ್ನಿಯ ಲಿವರ್ಪೂಲ್ ಸುತ್ತ ಮುತ್ತ ಕನ್ನಡಿಗ ವಲಸಿಗರು ಹೆಚ್ಚಾಗಿದ್ದಾರೆ. ಹಲವರಿಗೆ ನಮ್ಮ ತಾಯ್ನುಡಿಯ ಹಿರಿಮೆ ಗರಿಮೆಗಳನ್ನು ಹೊರದೇಶದಲ್ಲೇ ಹುಟ್ಟಿ ಬೆಳೆಯುತ್ತಿರುವ ತಮ್ಮ ಮಕ್ಕಳಿಗೆ ಮುಂದುವರೆಸುವುದು ಹೇಗೆ ಎಂಬ ಯೋಚನೆಯೇ ಈ ಕಾರ್ಯಕ್ರಮಕ್ಕೆ ಪ್ರೇರಣೆ ಎನ್ನಬಹುದು. ಈ ಕಾರ್ಯಕ್ರಮದ ಆಯೋಜಕರಾದ ನಾರಾಯಣ ಕನಕಾಪುರ ಅವರು ಸಿಡ್ನಿಯಲ್ಲಿ ಮಕ್ಕಳಿಗಾಗಿ ಕನ್ನಡ ಶಾಲೆಯನ್ನು ನಡೆಸುತ್ತಿದ್ದಾರೆ. ಕನ್ನಡ ಕ್ಯಾರಿಯೋಕಿ, ದಸರಾ ಹಬ್ಬ, ಅಡುಗೆ ಮತ್ತು ಆರೋಗ್ಯ ಕಾರ್ಯಕ್ರಮ, ಯೋಗ ಶಿಬಿರ (www.sugamakannada.com) ಹೀಗೆ ಕನ್ನಡ ಕುರಿತಾದ ಕೆಲಸಗಳಲ್ಲಿ ತೊಡಗಿಕೊಂಡು ಜನರನ್ನು ಒಟ್ಟು ಸೇರಿಸುವುದರಲ್ಲಿ ಎತ್ತಿದ ಕೈ. ಆದರೂ ಈ ಸಂಜೆಗೆ ಹೆಚ್ಚು ಜನ ಬರುವ ನಿರೀಕ್ಷೆಯನ್ನೇನೂ ಇಟ್ಟುಕೊಂಡಿಲ್ಲವೆನ್ನುತ್ತಿದ್ದ ಅವರಿಗೇ ಆಶ್ಚರ್ಯವೆಂಬಂತೆ ಸುಮಾರು ೪೫ ಜನ ಸೇರಿದ್ದರು.
ಯಾವುದೋ ಶಾಪಿಂಗ್ ಮಾಲ್ ಸುತ್ತುತ್ತಲೋ ಇಲ್ಲಾ ಬರ್ತಡೆ ಪಾರ್ಟಿಯಲ್ಲೋ ಕಳೆಯಬಹುದಾಗಿದ್ದ ಸಂಜೆ ಯೊಂದನ್ನು ಹರೀಶ್ ಅವರು ತಮ್ಮ ಪವರ್ ಪಾಯಿಂಟ್ ಪ್ರೆಸೆನ್ಟೇಶನ್ ನಲ್ಲಿ ಎಲ್ಲರನ್ನೂ ಹಿಡಿದಿಟ್ಟಿದ್ದು ನಿಜ. ದ್ರಾವಿಡ ಹಾಗೂ ಆರ್ಯ ಭಾಷಾ ಸಂಬಂಧದಿಂದ ಶುರುಮಾಡಿ ಕರ್ನಾಟಕ ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯಾಪ್ತಿ, ಕರ್ನಾಟಕ ಸಂಸ್ಕೃತಿಯ ಹಿರಿಮೆ ಗರಿಮೆ, ಕನ್ನಡಕ್ಕೆ ಇತರ ಭಾಷೆಯ ಮತ್ತು ಇತರ ಭಾಷೆಯಲ್ಲಿ ಕನ್ನಡದ ಪ್ರಭಾವ, ಕನ್ನಡ ಭಾಷೆಯ ಪ್ರಸ್ತುತತೆ, ಶುದ್ಧ ಕನ್ನಡ ಹೀಗೆ ಇತಿಹಾಸದ ಪಾಠವನ್ನು ನೆನಪಿಸುತ್ತಾ ಹೋದರು. ಹಲವಾರು ಸಂಶೋಧನಾ ಲೇಖನಗಳಿಂದ, ಪುಸ್ತಕಗಳಿಂದ ಮತ್ತು ಇತ್ತೀಚಿನ ಉತ್ಖನನದಲ್ಲಿ ಸಿಕ್ಕಿರುವ ಮಾಹಿತಿಗಳಿಂದ ಮುಖ್ಯ ಅಂಶಗಳನ್ನೆಲ್ಲಾ ಒಟ್ಟು ಹಾಕಿದ್ದರು. ಈ ಎಲ್ಲವನ್ನೂ ಆತ್ಮೀಯವಾಗಿ ಹೇಳುತ್ತಲೇ ಭಾಷೆಯ ಅಳಿವು ಉಳಿವಿನ ಬಗೆಗಿನ ನಮ್ಮೆಲ್ಲರ ಜವಾಬ್ದಾರಿಯನ್ನು ನೆನಪಿಸಿದರು. ಹಿಂದಿ-ಕನ್ನಡಗಳೂ ಸೇರಿದಂತೆ ೧೫ ಭಾಷೆಗಳು ಭಾರತದ ರಾಷ್ಟ್ರಭಾಷೆಗಳು ಕೇವಲ ಹಿಂದಿಮಾತ್ರವಲ್ಲ ಎನ್ನುವ ನಿಜಾಂಶ ಮಾತ್ರ ಎಲ್ಲರ ಹುಬ್ಬೇರಿಸಿತು. ರಾಮಾಯಣ ಮಹಾಭಾರತವನ್ನು ಒಂದು ಸಾಹಿತ್ಯಕ ಕೃತಿಯನ್ನಾಗಿ ಮಾತ್ರ ಗಮನಿಸಬೇಕು ಎಂಬ ಮಾತುಗಳು ಹಲವರಿಗೆ ಒಪ್ಪಿಗೆಯಾಗಿಲ್ಲದಿರಬಹುದು. ಅದೇನೆ ಇರಲಿ, ಇಷ್ಟು ದೊಡ್ಡ ಹರಹಿನ ವಿಷಯವನ್ನು ೨ಗಂಟೆಗಳಲ್ಲಿ ಅಡಕಮಾಡಿದ್ದ ಹರೀಶ್ ಅವರ ಬೆನ್ನು ತಟ್ಟಲೇ ಬೇಕು. ಗುಹ ಎನ್ನುವ ಹೆಸರಲ್ಲಿ ಕವನಗಳನ್ನು ಬರೆಯುವ ಇವರಿಗೆ ಕನ್ನಡ ಭಾಷೆ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲೂ ಅಪಾರ ಆಸಕ್ತಿ. ಕಥೆ, ಕವನ, ಇತಿಹಾಸ ಇವರ ಮೆಚ್ಚಿನ ವಿಷಯಗಳು. ಸಧ್ಯಕ್ಕೆ ಸಿಡ್ನಿಯ ಹನಿವೆಲ್ ಸಂಸ್ಥೆಯಲ್ಲಿ ಕೆಲಸ.
ಇವತ್ತಿನ ಇಂಟರ್ನೆಟ್ ವ್ಯವಸ್ಥೆಯಲ್ಲಿ ಒಂದು ಗುಂಡಿ ಒತ್ತಿದರೆ ಸಾಕು ನಮಗೆ ಬೇಕಾದ ಎಲ್ಲ ವಿಷಯಗಳೂ ಧೊಪ್ಪನೆ ನಮ್ಮ ಮುಂದೆ ಬೀಳಬಹುದಾದರೂ ಹೀಗೆ ಆಸಕ್ತರೆಲ್ಲಾ ಒಂದೆಡೆ ಕೂತು ಯೋಚಿಸುವಂತೆ ಮಾಡುವುದೇ ಸಮುದಾಯದ ಶಕ್ತಿಯೋ ಏನೋ. ಆದರೆ ಈ ಶಕ್ತಿ ಎಲ್ಲೋ ಹೂ ಹಾರ ಸನ್ಮಾನ ಅದ್ಧೂರಿ ಸಮಾರಂಭಗಳಲ್ಲಿ ಕಳೆದುಹೋಗದಂತೆ ಎಚ್ಚರವಹಿಸಬೇಕಾಗಿದೆ.
ಸಿಡ್ನಿಯಂತೂ ಹಲವು ಭಾಷೆ ಸಂಸ್ಕೃತಿಗಳ ಸಂಗಮದಂತಿದ್ದು ಇಂಗ್ಲೀಶೇತರ ಭಾಷಿಕರಿಗೆ ತಮ್ಮ ತಾಯ್ನುಡಿಯನ್ನು ಉಳಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತದೆ. ಹಾಗೆಂದೇ ವಾರಂತ್ಯದ ಶಾಲೆಗಳಲ್ಲಿ ಎಷ್ಟೊ ಮಕ್ಕಳು ಕಲಿಯುತ್ತಿದ್ದಾರೆ. ಆದರೂ ನಮ್ಮ ಸಾಂಸ್ಕೃತಿಕ ಸಂಘಗಳಲ್ಲಿ ಕನ್ನಡದ ಬಳಕೆಯ ಕೊರತೆ ಎದ್ದು ಕಾಣುತ್ತದೆ. ಕನ್ನಡದಲ್ಲೆ ಹುಟ್ಟಿ ಬೆಳೆದು, ಓದಿ ಹೊರದೇಶಕ್ಕೆ ಬಂದ ಒಂದೆರೆಡು ವರ್ಷದಲ್ಲೇ ತಾಯ್ನುಡಿಯ ಬಳಕೆ ಕೊಂಚ ಹಿಂದಾಗಿ ದಿನನಿತ್ಯದ ಕನ್ನಡ ಪದಗಳಿಗೂ ಒಮ್ಮೊಮ್ಮೆ ತಡಕಾಡುವಂತಾಗಿದೆ. ಯಾವುದೇ ಭಾಷೆ ಉಳಿದು ಬೆಳೆಯುವುದು ಅದರ ಬಳಕೆಯಿಂದಷ್ಟೆ.
ಕನ್ನಡತನ ಬೇರೆ, ಭಾರತೀಯತೆ ಬೇರೆ ಅಲ್ಲ , ಕನ್ನಡತನದ ಮೂಲಕವೇ ಭಾರತೀಯತನವನ್ನು ನಾವಿಂದು ಹುಡುಕಬೇಕಿದೆ. ಮಮ್ಮಿ ಡ್ಯಾಡಿಗಿಂತ ಮೊದಲು ಅಪ್ಪ ಅಮ್ಮಂದಿರನ್ನು ಮಕ್ಕಳ ತೊದಲು ನುಡಿಗಳಲ್ಲಿ ಕಾಣುವ ಬನ್ನಿ ಎನ್ನುತ್ತಿದ್ದ ಹರೀಶ್ ಅವರು ಇನ್ನೂ ಹತ್ತಾರು ಚರ್ಚೆಗಳನ್ನು ನಡೆಸುವ ಹುಮ್ಮಸ್ಸಿನಲ್ಲಿದ್ದಾರೆ. ಮುಂದಿನ ಚರ್ಚೆಯ ವಿಷಯಗಳು ಹೀಗಿವೆ.
- ಮಕ್ಕಳಿಗೆ ಕನ್ನಡ ಕಲಿಕೆ ಸುಲಭ ಮಾಡುವುದು ಹೇಗೆ?
- ನಮ್ಮೀ ಊರಿನಲ್ಲಿ ಕನ್ನಡ ಚಲನಚಿತ್ರಗಳ ಹಂಚಿಕೆ
- ಮಕ್ಕಳಿಗೆ ನಮ್ಮ ಸಂಸ್ಕೃತಿ ವಾತಾವರಣ ಸೃಷ್ಟಿಸುವಲ್ಲಿ ಭಾಷೆಯ ಪಾತ್ರ.
- ಕನ್ನಡ ಹಾಗೂ ಆಧ್ಯಾತ್ಮ
- ಹೊಸ ಓದುಗರಿಗೆ ಕನ್ನಡ ಸಾಹಿತ್ಯ ಪರಿಚಯ
- ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯದಲ್ಲಿ ಚಲನಚಿತ್ರಗಳ ಪಾತ್ರ
ಈ ಮುಂದಿನ ಕಾರ್ಯಕ್ರಮಗಳಿಗೆ ಆಸಕ್ತರೆಲ್ಲಾ ದಯವಿಟ್ಟು ಬನ್ನಿ ಪಾಲ್ಗೊಳ್ಳಿ.