![]() | ಸಿಡ್ನಿ ದಸರಾ ಬೊಂಬೆ ಹಬ್ಬ ಮತ್ತು ಸಂಗೀತ ಸಂಜೆಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಭಕ್ತಿ ಗೀತೆಗಳು,ಅದರಲ್ಲೂ ಹರಿದಾಸರ ನಿತ್ಯ ಹರಿದ್ವರ್ಣ ಗೀತೆಗಳ ಸಿರಿಯನ್ನು ಅಜರಾಮರವಾಗಿಸಿದ ಕೇವಲ ಕೈಬೆರಳೆಣಿಕೆಗೆ ಸೀಮಿತವಾಗಿರುವ ಪ್ರಖ್ಯಾತ ಸಂಗೀತಗಾರರು ಹಾಗೂ ಗಾಯಕರಲ್ಲಿ ಮುಂಚೂಣಿಯಲ್ಲಿರುವವರು ಶ್ರೀ ಪುತ್ತೂರು ನರಸಿಂಹ ನಾಯಕ್ ಅವರು. ಇವರ “ಪವಮಾನ ಜಗದ ಪ್ರಾಣ”, “ದಾಸನಾಗು ವಿಶೇಷನಾಗು”, “ಅನುದಿನ ನಿನ್ನ ನೆನೆದು ಮನವು ನಿನ್ನಲೇ ನಿಲ್ಲಲಿ”.....ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಕೊನೆಯೇ ಇಲ್ಲವೇನೋ ಎನಿಸುವ ಅನೇಕಾನೇಕ ಗೀತೆಗಳನ್ನು ಕೇಳದ, ಅರಿಯದ ಕನ್ನಡಿಗರೇ ಇಲ್ಲವೇನೋ ಎನಿಸುವಷ್ಟರ ಮಟ್ಟಿಗೆ ಜನಪ್ರಿಯರಿವರು. ಆಸ್ತಿಕರು ಹಾಗೂ ಭಕ್ತರನೇಕರಿಗೆ ಇವರ ಗೀತೆಯ ಮಾಧುರ್ಯದ ಸುಪ್ರಭಾತದೊಂದಿಗೇ ದಿನದ ಆರಂಭ, ಹಾಗೂ ಅದರ ಗುಂಗಿನಲ್ಲಿಯೇ ದೈನಂದಿನ ಕೆಲಸ ಕಾರ್ಯಗಳೆಲ್ಲ. ದೂರದ ಆಸ್ಟ್ರೇಲಿಯಾ ದೇಶದ ಕನ್ನಡಿಗರ ಮನೆಗಳಲ್ಲಿಯೂ ಸಿ.ಡಿ. ಹಾಗೂ ಧ್ವನಿ ಸುರುಳಿಗಳ ರೂಪದಲ್ಲಿ ನೆಲೆಸಿರುವ ಇವರು, ಎಲ್ಲೋ ದೂರ ಬಹು ದೂರದಲ್ಲಿರುವ ಧ್ರುವ ತಾರೆಯೆಂಬ ಭಾವನೆ ನಮಗೆ ಇದ್ದದ್ದು ಅವರು ನಮ್ಮೆಲ್ಲರೊಡನೆ ಬೆರೆತು ಒಂದಾಗಿ ಗೀತೆಗಳ ಹೂಹಾರವನ್ನು ನಾಡ ದೇವಿಗೆ ಅರ್ಪಿಸಿ, ನಮ್ಮಲ್ಲಿ ಧನ್ಯತೆಯ ಭಾವ ಮೂಡಿಸಿ, ಸಿಡ್ನಿ ದಸರಾ ಕಾರ್ಯಕ್ರಮಕ್ಕೆ ಕಳೆಕಟ್ಟಿಸುವವರೆಗೆ
ಇದು ಸಾಧ್ಯವಾದದ್ದು, ಸಿಡ್ನಿಯ ಸುಗಮ ಕನ್ನಡ ಕೂಟವು ಈ ಬಾರಿಯ ದಸರಾ ಕಾರ್ಯಕ್ರಮಕ್ಕೆ ಅವರನ್ನು ಅವರ ಶಕ್ತಿಯೊಡನೆ(ಅವರ ಧರ್ಮಪತ್ನಿ ಶ್ರೀಮತಿ ಕಲ್ಪನರೊಡನೆ) ಇಲ್ಲಿಗೆ ಕರೆಸಿಕೊಂಡು ಅಭೂತಪೂರ್ವ ಹಾಗೂ ವಿಶಿಷ್ಟ ರೀತಿಯಲ್ಲಿ ಸುಂದರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ನಮ್ಮೆಲ್ಲರ ಹೃದಯದಲ್ಲಿ ಮಾಸದ ಸವಿನೆನಪಾಗಿಸಿದಾಗ. ೨೬ ನೇ ಅಕ್ಟೋಬರ್ ೨೦೧೪ ರ ಸಂಜೆ ವ್ಯಾಟಲ್ ಗ್ರೂವ್ ಶಾಲೆಯ ಸಭಾಂಗಣವು ದಸರಾ ಬೊಂಬೆಗಳ ಪ್ರದರ್ಶನ, ರಂಗೋಲಿಗಳ ಚಿತ್ತಾರ ಹಾಗೂ ತಳಿರು ತೋರಣಗಳಿಂದ ಸಜ್ಜುಗೊಂಡಿದ್ದು ಸಿಡ್ನಿಯ ಅನೇಕ ಭಾಗಗಳಿಂದ ಮಾತ್ರವಲ್ಲದೇ ಆಸ್ಟ್ರೇಲಿಯಾದ ಬೇರೆ ಬೇರೆ ಭಾಗಗಳಿಂದ ಬಂದು ಸೇರುತ್ತಿದ್ದ ಅಭಿಮಾನಿಗಳಿಂದ ತುಂಬಿತುಳುಕುತ್ತಿದ್ದು ಗಾನ ಗಾರುಡಿಗರ ಭಕ್ತಿಗೀತೆಯ ಸಿಂಚನದಿಂದ ಪಾವನರಾಗಲು ಕಾಯುತ್ತಿರುವಂತೆಯೇ, ನಿರೂಪಕಿ ಶ್ರೀಮತಿ ಪೂರ್ಣಿಮಾ ಭಟ್ಟ ಅವರ ಸೊಗಸಾದ ಅಚ್ಚ ಕನ್ನಡದ ಸ್ವಾಗತ ಭಾಷಣದೊಂದಿಕೆ ಕಾರ್ಯಕ್ರಮದ ಶುಭಾರಂಭವಾಯಿತು.
ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಗೀತಾರಾಧನೆ ಸಾಗುತ್ತಾ ಅನೇಕಾನೇಕ ಅಭಿಮಾನಿಗಳ ಕೋರಿಕೆಯ ಗೀತೆಗಳು, ಹರಿದಾಸರ ಪ್ರಖ್ಯಾತ ಕೃತಿಗಳು, ವಚನ ಸಾಹಿತ್ಯದ ಗೀತೆಗಳಿಂದ ಮಾತ್ರವಲ್ಲದೇ ಕೆಲವು ಜನಪ್ರಿಯ ಭಾವಗೀತೆಗಳ ಗಾಯನದ ರಸದೌತಣವಾಯಿತು.ಮುಂದೆ ಶ್ರೀ ನಾರಾಯಣ ಕನಕಾಪುರ ಅವರಿಂದ ವಂದನಾರ್ಪಣೆ. ಭಕ್ತಿಗೀತೆ ಹಾಗೂ ಸಂಗೀತಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಕಲಾವಿದರಾದ ಶ್ರೀ ರಾಮ ಕುಡ್ವ ಹಾಗೂ ಶ್ರೀ ಶ್ರೀನಿವಾಸ ದಂಪತಿಗಳಿಗೆ ನರಸಿಂಹ ನಾಯಕ್ ಅವರಿಂದ ಸನ್ಮಾನ ಪತ್ರವನ್ನು ನೀಡಿ ಗೌರವಿಸಲಾಯಿತು. ಸಿಡ್ನಿಯ ಶ್ರೇಷ್ಠ ತಬಲಾವಾದಕ ಅಭಿಜಿತ್ ದಾನ್ ಹಾಗೂ ಶ್ರೇಷ್ಠ ತಾಳವಾದಕಿ ಶ್ರೀಮತಿ ಪೂರ್ಣಿಮ ಕುಡ್ವ ಅವರುಗಳು ಅಂದಿನ ಸುಂದರ ಗಾನಯಾನದಲ್ಲಿ ಸುಂದರ ಅನುಭವವನ್ನು ನೀಡುತ್ತಾ ಸಾಗಿದ್ದು ಅವರುಗಳನ್ನು ಕೃತಜ್ಞತೆಯಿಂದ ಸ್ಮರಿಸಿ ಗೌರವಿಸಲಾಯಿತು.
ಆಕಾಶ ದೀಪದಂತಿದ್ದ ಶ್ರೀನರಸಿಂಹ ನಾಯಕ್ ದಂಪತಿಗಳು ಬಂದು ಇಲ್ಲಿದ್ದು ನಮ್ಮೊಡನೆ ಬೆರೆತಾಗ, ಸಾವಿರಾರು ಹೃದಯಗಳಲ್ಲಿ ಭಗವನ್ನಾಮದ ಜ್ಯೋತಿಯನ್ನು ಬೆಳಗುತ್ತಿರುವ ಇವರ ಶ್ರೇಷ್ಠತೆಯಿರುವುದು ಇವರ ಸರಳತೆಯಲ್ಲಿ ಹಾಗೂ ಸಜ್ಜನಿಕೆಯಲ್ಲಿ ಎಂದು ಎನಿಸುತ್ತಿತ್ತು.
ಮುಂದಿನ ಭಾಗದಲ್ಲಿ ಜ್ಞಾನ, ಭಕ್ತಿ, ವೈರಾಗ್ಯಗಳಿಗೆ ಒತ್ತನ್ನಿಟ್ಟು ಭಗವಂತನ ಧ್ಯಾನಕ್ಕೆ ಮನ ಪ್ರೇರಿಸುವ ಅತ್ಯಂತ ಸುಂದರ ಗೀತೆಗಳ ಅರ್ಪಣೆಯೊಂದಿಗೆ ಕಡೆಯದಾಗಿ “ದಾಸನಾಗು ವಿಶೇಷನಾಗು” ಗೀತೆಯೊಡನೆ ಮುಕ್ತಾಯವಾದಾಗ ಎಲ್ಲರಲ್ಲೂ ಜೀವನ ಸಾರ್ಥಕತೆಯ ಭಾವನೆ ಇದ್ದಿತು.
ಕಡೆಯದಾಗಿ ರುಚಿಕರ ಭೋಜನದ ವ್ಯವಸ್ಥೆಯಿದ್ದು ಕಾರ್ಯಕ್ರಮಕ್ಕೆ ಸುಂದರ ಮುಕ್ತಾಯವನ್ನು ನೀಡಲಾಯಿತು. ಇದೆಲ್ಲ ನಡೆದದ್ದು ಕನಸೋ, ನಿಜವೋ ಎಂಬತಿದ್ದು ಮಿಂಚಿ ಮರೆಯಾದಂತಿದ್ದರೂ ಒದೊಂದೂ ಗಿತೆಗಳ ಗುಂಗು ಬಹುಷಃ ಎಂದೆಂದಿಗೂ ಮರುಕಳಿಸುತ್ತಿರುತ್ತದೆ. ಜೊತೆಗೆ ಭಾವಾರ್ಥವೂ ಹೃದಯದಲ್ಲಿ ನಾಟಿ ಭಗವದ್ಭಕ್ತಿಯ ಅಂಕುರವು ಮೊಳೆತರೆ ಮಿಂಚಿ ಮರೆಯಾದ ಈ ಕಾರ್ಯಕ್ರಮವು ಜೀವನ ಸಾರ್ಥಕತೆಯ ಕಾರಣವೇ ಆಗಬಹುದಲ್ಲವೇ? ಹೀಗಾಗಲೆಂಬುದೇ ನಮ್ಮೆಲ್ಲರ ಹೃತ್ಪೂರ್ವಕ ಹಾರೈಕೆ.