![]() | ಸಿಡ್ನಿ ಯುಗಾದಿ ಆಚರಣೆ 2014ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹಾಡು ನಮಗೆ ಸಿಡ್ನಿಯಲ್ಲಿ ನಿಜವಾಗಿದೆ. ನಮ್ಮ ಮನೆಗಳಲ್ಲಿ ಯುಗಾದಿಯ ಹಬ್ಬ ಹೊಸ ಬಟ್ಟೆ ತೊಟ್ಟು , ತಿಂಡಿ ತಿನಿಸುಗಳನ್ನು ಮಾಡಿ ಆಚರಿಸಿಯಾದ ಮೇಲೆ, ಯುಗಾದಿಯ ಹಬ್ಬವನ್ನು ನಮ್ಮ ಸಮುದಾಯದ ಒಡಗೂಡಿ ಮತ್ತೆ ಸಂಭ್ರಮಿಸುವ ಕಾಲವನ್ನು ಸುಗಮ ಗಾನ ಸಮಾಜ ಇದೇ ಮೇ ೧೭ಕ್ಕೆ wattle grove ಶಾಲೆಯ ಆವರಣದಲ್ಲಿ ಅವಕಾಶ ಮಾಡಿ ಕೊಟ್ಟಿತು.
ವೇದಿಕೆ ಗಣೇಶನ ವಿಗ್ರಹ, ಹೂವು, ಎಲೆಕ್ಟ್ರಿಕ್ ದೀಪಗಳ ಸಮೇತ ಕಂಗೊಳಿಸುತ್ತಿತ್ತು. ಮೊದಲಿಗೆ ಶ್ರೀಯುತ ದೇವ್ ದಿವಾಕರ್ ದೀಪ ಬೆಳಗಿ ಕಾರ್ಯಕ್ರಮದ ಉದ್ಗಾಟನೆ ಮಾಡಿದರು. ಬಳಿಕ ರಾಜೇಶ್ ಹೆಗ್ಡೆ ಅವರು ನಿರೂಪಣೆಗೆ ವೇದಿಕೆಗೆ ಬಂದರು. ಕುಮಾರಿ ಸಿಂಧು ಮತ್ತು ನಿರೀಕ್ಷ ಭಟ್ ಸ್ವಾಗತ ಗೀತೆ ಸುಶ್ರಾವ್ಯವಾಗಿ ಹಾಡಿದರು.
ಚಿಕ್ಕ ವಯಸ್ಸಿನ ಹುಡುಗಿ ಅದಿತಿ ಶ್ರೀವತ್ಸವ್ ಭರತನಾಟ್ಯದ ಪ್ರದರ್ಶನ ಕೊಟ್ಟಳು. ನಂತರ ಅವಳ ತಾಯಿ ಕೂಡ ಭರತ ನಾಟ್ಯ ಕಲಾವಿದೆ ಎಂದು ತಿಳಿಯಿತು . ಶೈಲಶ್ರೀ ಶ್ರೀವಾತ್ಸವ್ ಕೂಡ ಕಡೆಗೋಲು ತಾರೆನ್ನ ಚಿನ್ನವೇ ಹಾಡಿಗೆ ಯಶೋದ ಮತ್ತು ಕೃಷ್ಣನ ರೂಪವನ್ನು ಸಭಿಕರಿಗೆ ಅಭಿನಯಿಸಿ ತೋರಿಸಿದರು . ಶ್ರೀಮತಿ ಶೈಲಶ್ರೀ ಅವರು ನೃತ್ಯ ಪಟು ಮತ್ತು ಹಲವರಿಗೆ ಭಾರತದಲ್ಲಿ ತರಬೇತಿ ಶಾಲೆ ಕೂಡ ನಡೆಸುತ್ತಾ ಇದ್ದಾರೆ ಎಂದು ತಿಳಿಸಿ ಕೊಟ್ಟರು. ಇಂಥವರು ತಮ್ಮ ಪ್ರವಾಸಕ್ಕೆಂದು ನಮ್ಮ ನಾಡಿಗೆ ಬಂದು ,ಸಿಡ್ನಿ ಜನತೆಯನ್ನು ಮನ ರಂಜಿಸಿದರು.
ಶ್ರೀಯುತ ಶ್ರೀನಿವಾಸ್ ತಂಡದವರು , ಸಂತ ಶಿಶುನಾಳ ಗೀತೆಗಳಾದ " ಹಾವು ತುಳಿದೇನೆ ", "ಸ್ನೇಹ ಮಾಡಬೇಕೆನ್ತವಳ ", "ಕೂಕು ಎನ್ನುತಿದೆ " ಮತ್ತು ಕಡೆಯದಾಗಿ " ಸೋರುತಿಹುದು ಮನೆಯ ಮಾಳಿಗೆ " ಹಾಡಿ , C. ಅಶ್ವತ್ತ್ ಅವರನ್ನು ನೆನಪು ಮಾಡಿ ಕೊಟ್ಟರು. ಎಲ್ಲಾ ಹಾಡುಗಳಿಗೂ ಸವಿವರಣೆ ನೀಡಿ ಜನಗಳಿಗೆ ಅರ್ಥವಾಗುವ ಹಾಗೆ ಮಾಡಿದರು. ಹಾಡಿದ ಎಲ್ಲಾ ಕಲಾವಿದರು ಉತ್ತರ ಕರ್ನಾಟಕದ ಜನಗಳ ಹಾಗೆ ವೇಷ ಭೂಷಣ ತೊಟ್ಟಿದ್ದರು. ಇದರಿಂದ ಹಾಡಿದ ಹಾಡುಗಳು ಕಳೆ ಕಟ್ಟಿತ್ತು.
ಮತ್ತೆರಡು ದೇವರ ನಾಮಗಳಿಗೆ ಶೈಲಶ್ರೀಯವರು ಹೆಜ್ಜೆ ಹಾಕಿದರು. ನಂತರ ಲಿವರ್ಪೂಲ್ ಕನ್ನಡ ಶಾಲೆಯ ಪುಟಾಣಿಗಳು ಚಿರಪರಿಚಿತ ಸಿನಿಮಾದಿಂದ " ದೊಡ್ಡವರೆಲ್ಲಾ ಜಾಣರಲ್ಲ " ಹಾಡಿಗೆ ನೃತ್ಯ ಮಾಡಿ ನೆರೆದವರನ್ನೆಲ್ಲಾ ನಗಿಸಿದರು. ಮತ್ತೊಂದು ನೃತ್ಯ ಶಾಲೆಯ ಮಕ್ಕಳಿಂದ ಮನ ರಂಜಿಸಿತು.
ನಂತರ ಬಂದ ನಿರೂಪಕಿಯರಾದ ವೀಣಾ ಸುದರ್ಶನ್ ಮತ್ತು ಪೂರ್ಣಿಮಾ ಭಟ್ , ಯುಗಾದಿಯ ಕಾರ್ಯಕ್ರಮ ನೋಡಲು ನೆರೆದವರಿಗೆ ಬೇಸರವಾಗದಂತೆ ಮಾತಾಡಿ , ಹಾಡಿನ c.d ಕೆಲಸ ಮಾಡದೆ ಅಡಚಣೆ ಉಂಟಾದಾಗ, ಗಣೇಶನಿಗೊಂದು ಜೋರಾಗಿ ಜೈಕಾರ ಹಾಕಿಸಿ, ವಾತಾವರಣವನ್ನು ತಿಳಿಯಾಗಿಸಿದರು.
ಸಿಡ್ನಿ ಸಮುದಾಯದ ವೀಣಾ ವಾದಕರಾದ ದೇವ್ ದಿವಾಕರ್ ಅವರು ತಮ್ಮ ವೀಣೆಯಲ್ಲಿ ವಿವಿಧ ಹಾಡುಗಳನ್ನು ನುಡಿಸಿ, ಸಭಿಕರಿಂದಲೇ ಹಾಡುಗಳನ್ನು ಗುರುತಿಸುವಂತೆ ಕೇಳಿ , ಅಂತವರಿಗೆ ಬಹುಮಾನಗಳನ್ನು ಕೂಡ ಹಂಚಲಾಯಿತು . ಇದೊಂದು ರೀತಿಯ ಕ್ವಿಜ್ ಕಾರ್ಯಕ್ರಮದಂತೆ, ಸಭಿಕರನ್ನು ಕೂಡ ತೊಡಗಿಸಿಕೊಂಡು ಬಹಳ ಚೆನ್ನಾಗಿ ನಡೆಸಿಕೊಟ್ಟರು . ಕೊನೆಯಲ್ಲಿ ನುಡಿಸಿದ " ಭಾಗ್ಯಾದ ಲಕ್ಷ್ಮಿ ಬಾರಮ್ಮ " ಚಿಕ್ಕವರಿಂದ ದೊಡ್ಡವರ ಸಮೇತ ಸಾಮೂಹಿಕವಾಗಿ ಆನಂದದಲ್ಲಿ ಹಾಡಿ ಬಿಟ್ಟರು.
ಕನ್ನಡ ಶಾಲೆಯ ಸ್ಥಾಪಕರಾದ ಶ್ರೀಯುತ ಕನಕಾಪುರ ನಾರಾಯಣ್ ಅವರಿಂದ " ಸಿಂಹಗನ್ನಡಿ " ಅಡಿಬರಹದಲ್ಲಿ ,
ಬೇರೆ ಬೇರೆ ರಾಜ್ಯದಲ್ಲಿರುವ ಕನ್ನಡದ ಹೆಸರುಳ್ಳ ಊರುಗಳನ್ನು ಪಟ್ಟಿ ಮಾಡಿ ಹೆಸರಿಸಿದರು. ಕನ್ನಡಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳ ಬಗ್ಗೆ ಕೆಲವು ಮಾತನಾಡಿದರು. ಅವರುಗಳಲ್ಲಿ ಸಾಲು ಮರದ ತಿಮ್ಮಕ್ಕ, ವಿಶ್ವೇಶ್ವರಯ್ಯ , ಶೇಷಾದ್ರಿ ಅಯ್ಯರ್ ಇನ್ನೂ ಅನೇಕರಿದ್ದರು. ಅದಲ್ಲದೆ ಸಮಾಜಕ್ಕಾಗಿ ದುಡಿದವರ ಪರಿಚಯಿಸುತ್ತಾ ರಾಜರಾಮ್ ಮೋಹನ ರಾಯ್ , ದಾದ ಬಾಯಿ ನವರೋಜಿ ಮತ್ತು ಬಾಲ ಗಂಗಾಧರ್ ತಿಲಕ್ ನೆನಪು ಮಾಡಿದರು. ಕನ್ನಡಕ್ಕಾಗಿ ನಾವೆಲ್ಲಾ ಏನಾದರು ಚಿಕ್ಕ ಪ್ರಯತ್ನ ಮಾಡಲೇ ಬೇಕು ಎಂಬ ಸಂದೇಶ ಕೊಟ್ಟರು .
ಕನ್ನಡ ಶಾಲೆ ಮಕ್ಕಳು ಕೆಲವು ಪುಟ್ಟ ಪುಟ್ಟ ಕವನಗಳು , ನಾಟಕ ಮಾಡಿ ಎಲ್ಲರನ್ನೂ ಮನ ರಂಜಿಸಿದರು. ಕನ್ನಡ ಕಲಿತ ಮಕ್ಕಳು, ಪುಟ್ಟ ನಾಟಕದ ಸಂಬಾಷಣೆಗಳನ್ನು ಸುಲಲಿತವಾಗಿ ಹೇಳಿದ್ದು ಎಲ್ಲರಿಗೂ ಆನಂದ ಮತ್ತು ಆಶ್ಚರ್ಯ ಉಂಟು ಮಾಡಿತು.
ಕನ್ನಡ ಶಾಲೆಯೂ ಅಥವಾ ಇಂಗ್ಲಿಷ್ ಶಾಲೆಯೂ ಎಂಬ ಪುಟ್ಟ ನಾಟಕರೂಪಕ ವನ್ನು ಶ್ರೀಯುತ ನಾರಾಯಣ್ ಮತ್ತು ವೀಣಾ ಸುದರ್ಶನ್ ಹಳ್ಳಿ ಭಾಷೆಯ ಸಂಭಾಷಣೆಗಳೊಂದಿಗೆ ಪ್ರಸ್ತುತ ಪಡಿಸಿದರು.
ಯುಗಾದಿಯ ಹಬ್ಬ ಒಬ್ಬಟ್ಟಿನ ಊಟವಿಲ್ಲದಿದ್ದರೆ ಸಂಪೂರ್ಣವೆನಿಸುವುದಿಲ್ಲ. ಎಲ್ಲಾ ಕಾರ್ಯಕ್ರಮಗಳು ಮುಗಿಯುವ ಹೊತ್ತಿಗೆ ಹೊಟ್ಟೆ ಕಾದು ತಮಟೆ ಬಡಿಯುತ್ತಿತ್ತು. ಬಂದವರೆಲ್ಲರಿಗೂ , ಪಲ್ಯ, ಕೋಸಂಬರಿ, ಹುಳಿ , ಮೊಸರನ್ನ ಮತ್ತು ಉಪ್ಪಿನಕಾಯಿ , ಒಬ್ಬಟ್ಟಿನ ಊಟ ಮಾಡಿ, ಕನ್ನಡಿಗರೆಲ್ಲಾ ಒಟ್ಟು ಸೇರಿ, ಯುಗಾದಿಯ ಸಂಭ್ರಮವನ್ನು ಪರಿಪೂರ್ಣವಾಗಿ ಸವಿದರು.
ವರದಿ - ಶ್ರೀಮತಿ ಸ್ಮಿತಾ ಮೇಲ್ಕೋಟೆ