![]() | ಕನ್ನಡ ಕ್ಯಾರೆಯೋಕೆ ಸಂಜೆ ಮತ್ತು ಶ್ರೀಯುತ ಸುದರ್ಶನ್ ಅವರಿಗೆ ಸನ್ಮಾನ |
ವರದಿ - ಶ್ರೀಮತಿ ರಾಜಲಕ್ಷ್ಮಿ ನಾರಾಯಣ
ಕಳೆದ ಸೆಪ್ಟೆಂಬರ್ ೨೭ರಂದು ಸುಗಮ ಗಾನ ಸಮಾಜ ಏರ್ಪಡಿಸಿದ್ದ ಕನ್ನಡ ಕ್ಯಾರೆಯೋಕೆ ಮತ್ತು ಶ್ರೀಯುತ ಸುದರ್ಶನ್ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ವಾಟಲ್ ಗ್ರೋವ್ ಸಾರ್ವಜನಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.ಅದರ ಒಂದು ಪುಟ್ಟ ವರದಿ ಇಲ್ಲಿದೆ. ಸಮಿತಿಯವರು ಈ ಬಾರಿ ಸಮಯಕ್ಕೆ ಸರಿಯಾಗಿ ಸಜ್ಜಾಗಿದ್ದರೂ ಪ್ರೇಕ್ಷಕರು ತಡವಾಗಿ ಸಭೆಗೆ ಆಗಮಿಸಿದ್ದು ಬಹಳ ಶೋಚನೀಯ. ತುಂಬಿದ ಸಭೆ ಅಲ್ಲದಿದ್ದರೂ ಒಳ್ಳೆಯ ಪ್ರೇಕ್ಷಕರು ಅನ್ನಬಹುದು,ಏಕೆಂದರೆ ಗಾಯಕ ಗಾಯಕಿಯರು ಹಾಡುವಾಗ ಯಾವುದೇ ಶಬ್ದ ಮಾತು ಇಲ್ಲದೆ ಹಾಡುಗರಿಗೆ ಅಡಚಣೆಯಿಲ್ಲದೆ ಸುಗಮವಾಗಿ ನಡೆಯಿತು.
ದೀಪಕ್ ಅವರ ಮಧುರ ಕಂಠದಲ್ಲಿ ಶರಣು ಶರಣಯ್ಯ ಶರಣು ಬೆನಕ ಪಿಬಿಎಸ್ ನೆನಪು ಮಾಡಿಕೊಡುತ್ತಾ ನಾಂದಿಯಾದರೆ, ಚಿ.ಕಾರ್ತಿಕ್ ಹಿಂದೂಸ್ಥಾನವು ಎಂದೂ ಮರೆಯದ ಎನ್ನುವ ಹಾಡನ್ನು ಮುದ್ದಾಗಿ ಹಾಡಿದನು. ಶ್ರೀಧರ್ ನೊಣವಿನಕೆರೆ ಅವರು ಅಣ್ಣಾವ್ರ ಆಕಾಶ ಭೂಮಿಗಳ ಎನ್ನುವ ಹಾಡನ್ನು ಭಕ್ತಿಪೂರ್ವಕವಾಗಿ ಹಾಡಿದರೆ, ಅದೇ ರೀತಿ ಶ್ರೀಮತಿ ರೇಖಾ ಇಂದು ಎನಗೆ ಗೋವಿಂದಾ ಇಂಪಾಗಿ ಹಾಡಿದರು. ಕಾರ್ಯಕ್ರಮಕ್ಕೆ ಮೆರಗುನೀಡಿದ ಯುಗಳ ಗೀತೆ ಶಿಲೆಗಳು ಸಂಗೀತವಾ ಹಾಡಿದೆ ಕು.ಸಿಂಧು ಮತ್ತು ರಾಜೇಶ್ ಹೆಗ್ಗಡೆ ಹಾಡಿ ಜೋರು ಚಪ್ಪಾಳೆ ಗಿಟ್ಟಿಸಿದರು. ಶ್ರೀನಿವಾಸನ್ ಅವರ ಕಂಚಿನ ಕಂಠದಲ್ಲಿ ನೂರು ಜನ್ಮಕೂ ನೂರಾರು ಜನ್ಮಕೂ ಎಂಬ ಹಾಡು ಪ್ರೇಕ್ಷಕರಿಂದ ತುಂಬಾ ಮೆಚ್ಚುಗೆ ಪಡೆದರೆ, ನಂತರ ಹಾಡಿದ ಕು.ನಿರೀಕ್ಷ ಎಂದಿನಂತೆ ಸುಮಧುರ ಧ್ವನಿಯಲ್ಲಿ ಹೂವು ಚೆಲುವೆಲ್ಲಾ ತಂದೆಂದಿತು ಹಾಡಿದಳು. ಕು.ಸಂಜನ ಮತ್ತು ಶಂಕರ್ ಮಧ್ಯಸ್ಥ ಹಾಡಿದ ತಂ ನಂ ತಂ ನಂ ಆಯ್ಕೆಗೆ ತಕ್ಕಂತೆ ಚೆನ್ನಾಗಿ ಮೂಡಿ ಬಂದಿತು.ದಿವಾಕರ್ ಅವರು ಹಾಡಿದ ಎಂಥಾ ಸೌಂದರ್ಯ ನೋಡು, ವಿಜೇಂದ್ರ ಹಾಡಿದ ಒಲವಿನ ಪ್ರಿಯಲತೆ, ಶ್ರೀಮತಿ ಕೀರ್ತಿ ಹಾಡಿದ ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ, ಶ್ರೀಮತಿ ಭಾರ್ಗವಿ ಹಾಡಿದ ತಂಗಾಳಿಯಲ್ಲಿ ನಾನು ತೇಲಿ ಬಂದೆ, ಅನಿಲ ಹಾಡಿದ ಅನಿಸುತಿದೆ ಯಾಕೋ ಇಂದು ಮತ್ತು ಬಸವರಾಜ್ ಅವರ ಗುಡು ಗುಡಿಯಾ ಸೇದಿ ನೋಡು ಹಾಡು ಕೇಳಿ ಕ್ಯಾರೆಯೋಕೆ ಕಾರ್ಯಕ್ರಮದ ಭವಿಷ್ಯಕ್ಕೆ ಒಳ್ಳೆಯ ಗಾಯಕರ ಪಟ್ಟಿಗೆ ಮತ್ತಷ್ಟು ಸಂಖ್ಯೆ ಹೆಚ್ಚಿತನಿಸಿತು.
ರಾಜೇಶ್ ಮತ್ತು ಶ್ರೀನಿವಾಸನ್ ಮತ್ತೆ ವೇದಿಕೆ ಏರಿ ಮುಗಿಲ ಮಲ್ಲಿಗೆಯೋ ಮತ್ತು ಶ್ರೀಕಂಠಾ ವಿಷ ಕಂಠ ಹಾಡಿದಾಗ ಮಧುರ ಧ್ವನಿಗಳು ಮತ್ತು ಸುಮಧುರ ಗೀತೆಯ ಆಯ್ಕೆ ಹಾಲು-ಜೇನಿನ ಸಮ್ಮಿಲನವಾದಂತೆ ಭಾಸವಾಯಿತು.ಇದರ ಮಧ್ಯೆ ಶಂಕರ್ ಅವರು ಬಿಸಿಲಾದರೇನು ಎಸ್ ಪಿ ಬಿ ಅವರ ಹಿಟ್ ಹಾಡನ್ನು ಹಾಡಿ ಮೆಚ್ಚುಗೆ ಪಡೆದರು.ಶ್ರೀ ನಾಗಶೈಲ ಕುಮಾರ್ ಅವರು ಕನ್ನಡ ಚಲನಚಿತ್ರರಂಗದ ಬಗ್ಗೆ ನಡೆಸಿದ ಕ್ವಿಸ್ ಪ್ರೇಕ್ಷಕರೆಲ್ಲರನ್ನೂ ಒಳಗೊಳ್ಳುವಂತೆ ಮಾಡಿತು.
ಅಂದಿನ ಕಾರ್ಯಕ್ರಮ ಮತ್ತೊಂದು ಮುಖ್ಯ ಅಂಶವಾಗಿದ್ದ ಸುದರ್ಶನ್ ಅವರಿಗೆ ಸನ್ಮಾನ. ಶ್ರೀ ನಾರಾಯಣ ಅವರು ಸುದರ್ಶನ್ ಅವರನ್ನು ಪರಿಚಯಿಸುವುದರ ಮೂಲಕ ವೇದಿಕೆಗೆ ಬರಮಾಡಿಕೊಂಡರು,ಇದಕ್ಕೂ ಮೊದಲು ವೇದಿಕೆಗೆ ಶ್ರೀಮತಿ ರೇಖಾ ಶಶಿಕಾಂತ್, ಶ್ರೀ ಸಿಡ್ನಿ ಶ್ರೀನಿವಾಸ್, ಶ್ರೀ ಶ್ಯಾಮ್ ಸಿಂಗ್, ಶ್ರೀ ನಾಗಶಯನ, ಶ್ರೀ ಪರಮೇಶ್ ಅವರನ್ನು ಬರಮಾಡಿಕೊಳ್ಳಲಾಗಿತ್ತು.ಪ್ರತಿಯೊಬ್ಬರೂ ಸುದರ್ಶನ್ ಅವರ ಗುಣ ಗಾನ ಮಾಡಿ,ಅವರಲ್ಲಿರುವ ಕಲೆ, ಜಾಣ್ಮೆ, ಕೆಲಸ ಮಾಡುವ ವೈಖರಿ,ಅವರೊಡನೆ ಒಡನಾಟ ಎಲ್ಲರೂ ಒಬ್ಬೊಬ್ಬರಾಗಿ ವಿವರವಾಗಿ ಪರಿಚಯಿಸಿದರು ಕಡೆಯಲ್ಲಿ ಸುದರ್ಶನ್ ಅವರಿಗೆ ಸುಗಮ ಕನ್ನಡ ಕೂಟದ ಪರವಾಗಿ ಪುಟ್ಟ ಪ್ರಶಂಸಾ ಫಲಕವನ್ನು ನೀಡಲಾಯಿತು. ಶ್ರೀಮತಿ ವೀಣಾಸುದರ್ಶನ್ ಅವರು ಸುದರ್ಶನ್ ಅವರಿಗೆ ನೀಡುತ್ತಿರುವ ಸಹಕಾರ, ಉತ್ತೇಜನ ಗಮನಿಸಿ ಅವರಿಗೂ ಕೂಡ ವೇದಿಕೆಗೆ ಕರೆದು ಹೂವಿನ ಗುಚ್ಚದೊಂದಿಗೆ ಪ್ರಶಂಸೆ ಮಾಡುವ ಅವಕಾಶ ನನಗೆ ಸಿಕ್ಕಿತು.
ಇದಾದ ತಕ್ಷಣ ದೀಪಕ್ ಅವರು ಹಾಡಿದ ಏನಾಗಲೀ ಮುಂದೆ ಸಾಗುನೀ ಕುಳಿತವರೆಲ್ಲರೂ ತಾಳಕ್ಕೆ ತಕ್ಕಂತೆ ಚಪ್ಪಾಳೆ ಸಮೇತ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಸಿ ಬಿಸಿ ಹುಗ್ಗಿ ಮತ್ತು ಪೈನಾಪಲ್ ಕೇಸರಿ ಭಾತ್ ಚುಮು ಚುಮು ಚಳಿಗೆ ಹೇಳಿ ಮಾಡಿಸಿದ ಹಾಗಿತ್ತು.
ಇಂತಹ ಒಳ್ಳೆಯ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚು ಜನ ಬರುವಂತಾಗಬೇಕು ಎನ್ನುವ ಅಭಿಲಾಶೆಯೊಂದಿಗೆ ನನ್ನ ಪುಟ್ಟ ವರದಿಗೆ ಅಂತ್ಯ ಹಾಡುತ್ತಿದ್ದೇನೆ.