![]() | ಸಿಡ್ನಿ ಯುಗಾದಿ ಆಚರಣೆ 2013ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಸಿಡ್ನಿ ಯುಗಾದಿ ಹಬ್ಬದ ಸಡಗರ ಶನಿವಾರ ಏಪ್ರಿಲ್ 13 ರಂದು WattleGrove ಸಾರ್ವಜನಿಕ ಶಾಲೆಯ ಆವರಣದಲ್ಲಿ ನಡೆದ ಒಂದು ಪುಟ್ಟವರದಿ ಈ ಕೆಳಗೆ ಹಂಚಿಕೊಳ್ಳುತ್ತಿದ್ದೇವೆ. ತಡವಾಗಿ ತುಂಬಿದ ಸಭೆ ಸುಮಾರು ಅರ್ಧಘಂಟೆ ನಂತರ ಶುರುವಾದ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಮುಖ್ಯ ಅತಿಥಿಗಳಾದ ಶ್ರೀಯುತ ಹೆಚ್ ಪಿ ರಂಗಣ್ಣನವರು ಮತ್ತು ಶ್ರೀಮತಿ ಅಶ್ವಿನಿ ಸತೀಶ್ ಅವರುಗಳು ನಾಂದಿ ಹಾಡಿದರು.ಬೇವುಬೆಲ್ಲದ ನೈವೇದ್ಯ ಮಾಡಿ ಯುಗಾದಿಯ ಅರ್ಥ ಮತ್ತು ಪಂಚಾಂಗ ಶ್ರವಣ, ವಿಜಯ ನಾಮ ಸಂವತ್ಸರದ ರಾಶಿಫಲಗಲ ಕಿರು ಪರಿಚಯವನ್ನು ಕನ್ನಡದಲ್ಲೇ ನಮ್ಮ ಪರಿವಾರದ ಶ್ರೀ ಬದರಿ ನಾರಾಯಣ ಮಾಡಿಕೊಟ್ಟರು. ನೆರೆದ ಜನ ಬೇವು ಬೆಲ್ಲದ ಸವಿ ಹಂಚಿಕೊಂಡು ಉಣ್ಣುವ ವೇಳೆಗೆ ಮುನ್ನ ದೀಪ ಬೆಳಗಿದ ಕೂದಲೇ ಕುಮಾರಿ ಸಿರಿ ಸೊಗಸಾಗಿ "ಹಚ್ಚೇವು ಕನ್ನಡದ ದೀಪ" ಎಂಬ ಕ್ಯಾರೆಯೋಕೆ ಹಾಡನ್ನು ಹಾಡಿದಳು. ಮುಂದೆ ಮೂರು ಹೆಣ್ಣು ಮಕ್ಕಳಿಂದ ಹಾಡಿನ ಕಾರ್ಯಕ್ರಮ ಕಾದಿತ್ತು. ಮೊದಲಿಗೆ ಕು|ರೋಶನಿ ವೆಂಕಟಾಚಲ ನಿಲಯಂ ಎಂಬ ಕ್ಯಾರೆಯೋಕೆ ಹಾಡನ್ನು ಹಾಡಿದರೆ,ಕು|ಸಿಂಧು ದರಾ ಬೇಂದ್ರೆಯವರ"ಪಾತರಗಿತ್ತಿ ಪಕ್ಕ" ಎಂಬ ಭಾವಗೀತೆಯನ್ನು ಕು|ತನುಳ ಕೀಬೋರ್ಡ್ ಸಹಾಯದಿಂದ ಹಾಡಿದಳು. ನಂತರ ಕು|ನಿರೀಕ್ಷ "ಹಾಡು ಹಳೆಯದಾದರೇನು" ಎಂಬ ಚಿತ್ರಗೀತೆಯ ಕ್ಯಾರೆಯೋಕೆ ಹಾಡನ್ನು ಇಂಪಾಗಿ ಹಾಡಿದಳು.ಕಾರ್ಯಕ್ರಮದ ಮೊದಲಭಾಗದ ನಿರೂಪಣೆಯನ್ನು ಕು|ಸಹನ ಚೊಕ್ಕವಾಗಿ ನಡೆಸಿಕೊಟ್ಟಳು.
ಸಿಡ್ನಿ ಕನ್ನಡ ಶಾಲೆಯ ಮಕ್ಕಳು ಆ ದಿನದ ವೇದಿಕೆಯ ಅತಿ ಆಕರ್ಷಕ ಕಾರ್ಯಕ್ರಮ "ಕನ್ನಡ ಒಗಟುಗಳು" ಚೆನ್ನಾಗಿ ನಡೆಸಿಕೊಟ್ಟರು. ಚಿಕ್ಕ ಚಿಕ್ಕ ಮಕ್ಕಳ ಪುಟ್ಟಬಾಯಿಗಳಿಂದ ತಲೆಗೆರಡರಂತೆ ಒಗಟುಗಳನ್ನು ಕೇಳುತ್ತಿರಲು ಪ್ರೇಕ್ಷಕರು ಉತ್ತರವನ್ನು ಹೇಳಲು ಕಾತುರತೆಯಿಂದ ಆಲಿಸುತ್ತಿದ್ದುದು ನೋಡಲು ಚೆನ್ನಾಗಿತ್ತು. "ಮಗುವೆನನ್ನ ಒಗಟಕೇಳು" ಎಂಬ ಸಿನಿಮಾ ಹಾಡನ್ನು ಅಳವಡಿಸಿ ಮಾಡಿದ ಅಭಿನಯದೊಂದಿಗೆ ಒಗಟು ಕಾರ್ಯಕ್ರಮ ಮುಗಿದರೆ, ತುಮು ತುಮು ತುಮು ತುಂಬಿಬಂದಿತ್ತಾ ಎಂಬ ಭಾವಗೀತೆಗೆ ಮಕ್ಕಳು ಹೆಜ್ಜೆ ಹಾಕಿದ್ದು ನೋಡುಗರ ಮನ ಸೆಳೆಯಿತು ಎರಡೂ ಹಾಡಿನ ನೃತ್ಯದ ನಿರ್ದೇಶನ ಶ್ರೀ ಕನಕಾಪುರ ನಾರಾಯಣ ಹೊತ್ತಿದ್ದರು. "ತಾಳಮದ್ದಲೆ" ಶ್ರೀಯುತ ದಿವಾಕರ್ ಹೇರಳೆ ಮತ್ತು ಸಂಗಡಿಗರಿಂದ ಸಿಡ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಈ ವೇದಿಕೆಯ ಮೇಲೆ ಮೂಡಿ ಬಂದಾಗ ಇಡೀ ಸಭಾಂಗಣ ಸ್ವಲ್ಪವೂ ಸದ್ದು ಮಾಡದೆ ಆಸಕ್ತಿಯಿಂದ ಅನುಭವಿಸುವ ಸೈ ಎನಿಸಿದ ಕಾರ್ಯಕ್ರಮ ಅನಿಸಿಕೊಂಡಿತು.ಇಂಪಾದ ಭಾಗವತರ ಗಾಯನ, ಸೊಗಸಾದ ತಾಳ-ವಾದ್ಯ ವೃಂದ, ಹಾಸ್ಯದ ಲೇಪನವಿದ್ದರೂ ಅರ್ಥಪೂರ್ಣ ಸಂಭಾಷಣೆ ಎಲ್ಲವೂ ಕಾರ್ಯಕ್ರಮಕ್ಕೆ ಹೆಚ್ಚು ಮೆರಗು ತಂದಿತು. ಹೆಚ್ ಪಿ ರಂಗಣ್ಣನವರ ವೀಣಾವಾದನ ಪ್ರೇಕ್ಷಕರಿಗೆ ಮತ್ತೊಂದು ಮನರಂಜನೆ ಆದಿನದ ಆಕರ್ಷಣೆ. ಇನ್ನೂ ಕಾಲಾವಕಾಶ ಕೊಡಬಹುದಿತ್ತು ಅನ್ನುವ ಮಾತು ಸಭಿಕರಿಂದ ಕೇಳಿಬಂದಿತು,ಕೆಲವೇ ನಿಮಿಷ ಅವರು ವೀಣೆ ನುಡಿಸಿದರೂ ಬಹಳ ಆಕರ್ಷಣೀಯವಾಗಿ ಮೂಡಿದ ಸಂಗೀತ ಅದಾಗಿತ್ತು.
ಅಂತಿಮವಾಗಿ ಬಹಳ ನಿರೀಕ್ಷೆಯಿಂದ ಕಾದು ಕುಳಿತಿದ್ದಕ್ಕೂ ಸಾರ್ಥಕ ಎನ್ನುವ ಹಾಗೆ ವಿದೂಷಿ ಶ್ರೀಮತಿ ಸತೀಶ್ ಅವರು ಎರಡು ಶಾಸ್ತ್ರೀಯ ಸಂಗೀತದ ಕೀರ್ತನೆ ಹಾಡಿ ಭಾವಗೀತೆಗಳನ್ನು ಸುಶ್ರಾವವಾಗಿ ಹಾಡಿದರು. ಸೊಗಸಾದ ಕಂಠಸಿರಿ, ಗೀತೆಗಳ ಆಯ್ಕೆ, ಭಾವಪೂರ್ಣ ಗಾಯನ ಕೇಳುಗರ ಮನ ಗೆದ್ದರು. ಎನ್ ಎಸ್ ಲಕ್ಷ್ಮೀನಾರಾಯಣ ಭಟ್, ಕೆ ಎಸ್ ನರಸಿಂಹ ಸ್ವಾಮಿ, ದೊಡ್ಡರಂಗೇಗೌಡ ಇನ್ನೂ ಅನೇಕ ಹೆಸರಾಂತ ಕವಿಗಳ ಭಾವಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.ಸಿಡ್ನಿಯ ಹೆಸರಾಂತ ಗಾಯಕಿ ಶ್ರೀಮತಿ ಪುಷ್ಪಾ ಜಗದೀಶ್ ಅವರು ಶ್ರೀಮತಿ ಅಶ್ವಿನಿ ಮತ್ತು ರಂಗ ವಿನ್ಯಾಸ ಸೊಗಸಾಗಿ ನವಿಲಿನ ಆಕೃತಿ ಮಾಡಿದ್ದ ಶ್ರೀಮತಿ ಪ್ರತಿಭಾ ದೀಪಕ್ ಅವರಿಗೂ ನೆನಪಿನ ಕಾಣಿಕೆ ಮತ್ತು ಉಡುಗೊರೆಗಳಂದಿಗೆ ಸನ್ಮಾನಿಸಿಸಿದರೆ ಹಿರಿಯರಾದ ಶ್ರೀ ಅಶೋಕ್ ಅವರು ಶ್ರೀ ಹೆ ಪಿ ರಂಗಣ್ಣ ಮತ್ತು ಉಳಿದೆಲ್ಲ ಕಲಾವಿದರೂ ಉಡುಗೊರೆಯಿತ್ತು ಗೌರವಿಸಿದರು.
ಪೋಷಕರೇ ಮಾಡಿ ತಂದಿದ್ದ ರಾತ್ರಿಯ ರುಚಿಯಾದ ಊಟ ಕೊಂಚ ಉಳಿಯಿತಾದರೂ, ಕಾರ್ಯಕ್ರಮ ಮುಗಿಯುವಾಗಾಗಲೇ ರಾತ್ರಿ ಒಂಭತ್ತುವರೆ ಘಂಟೆಯಾಗಿತ್ತು. ಶಾಲೆಯ ಪೋಶಕರ ಸಹಾಯದಿಂದ ಆವರಣ ಅಚ್ಚುಕಟ್ಟಾಗಿ ಸ್ವಚ್ಚಗೊಂಡು ಯುಗಾದಿಯ ಕಾರ್ಯಕ್ರಮ ಯಶಸ್ವಿಯಾಗಿ ನೆರವೆರಿತು