![]() | ಕನ್ನಡ ಕವನ ಕಂಪು 2012ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಆತ್ಮೀಯ ಸ್ನೇಹಿತರೇ,
ಅಭಿಮಾನ ಎನ್ನುವ ಶಬ್ದಕ್ಕೆ ಅರ್ಥವೇನು? ಕನ್ನಡಾಭಿಮಾನ ವೆಂದರೆ?ಅವರು ಯಾರು?ನಿಜವಾದ ಅಭಿಮಾನಿಗಳು? ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತಿದ್ದ ಸಮಯದಲ್ಲಿ ಅದಕ್ಕೆ ಸ್ವಲ್ಪಸಮಾಧಾನದ ಉತ್ತರ ಸಿಕ್ಕಿತು. ಕನ್ನಡದ ಭಾಷೆಯ ಮೇಲೆ ನಿಜವಾದ ಅಭಿಮಾನ ಇರಬೇಕಾದರೆ ಕನ್ನಡದಲ್ಲಿ ಕವಿತೆ ಓದಿರಬೇಕು, ಕಲಿತಿರಬೇಕು, ಅರಿತಿರಬೇಕು ಕನ್ನಡದ ಕಥೆ ಕಾದಂಬರಿ ನಾಟಕ ಇವುಗಳಲ್ಲಿ ತೊಡಗಿಸಿಕೊಂಡಿರಬೇಕು ಎನ್ನುವುದು ಈಗಷ್ಟೇ ಕನ್ನಡದ ವಿಷಯ ಅರೆದು ಕುಡಿದವರ ನುಡಿಮುತ್ತುಗಳಲ್ಲಿ ಆಲಿಸಿದ್ದು ಗುಯ್ ಗುಟ್ಟುತ್ತಿದೆ. ಕನ್ನಡ ಒಂದು ಸಂಸ್ಕೃತಿ ಬರೀ ಭಾಷೆಯಲ್ಲ.
ಆದರೆ ಸ್ವಂತ ಊರಿನಲ್ಲಿ ಕನ್ನಡ ಭಾಷೆಗೆ, ಜನರಿಗೆ, ಜಲಕ್ಕೆ, ಜಾಗಕ್ಕೆ ಆಗುತ್ತಿರುವ ಅನ್ಯಾಯ ನೆನೆದರೆ ಕರುಳು ಚುಳ್ ಎನ್ನುವ ಭವಿಷ್ಯ ಕಣ್ಮುಂದೆ ಹಾದು ಹೋಗುತ್ತದೆ, ಯಾರಿಗೆ ಬೇಕಿದೆ ಕನ್ನಡ ಎನ್ನುವ ತಾತ್ಸಾರದ ಅಲೆಯಲ್ಲಿ ನಮ್ಮವರು ಕೊಚ್ಚಿಹೋಗುತ್ತಿದ್ದಾರೆ, ಹೀಗಿರುವಾಗ ಇಲ್ಲಿ ನೋಡಿ ಕನ್ನಡ ಶಾಲೆಯ ಆವರಣದಲ್ಲಿ ಇದೇ ನವೆಂಬರ್ ೨೫ರಂದು ಕನ್ನಡ ಕವನ ಕಂಪು ಎನ್ನುವ ಸಹೃದಯೀ ಅಭಿಮಾನಿಗಳು ನೆರೆದು, ಮೂರುವರೆ ವರ್ಷದ ಮಕ್ಕಳಿಂದ ಮೊದಲುಗೊಂಡು ಹಿರಿಯರೆಲ್ಲಾ ಪ್ರತಿಯೊಬ್ಬರೂ ಕವನದ ಕಾಲುವೆ ಕಣ್ಮುಂದೆಯೇ ಹರಿಸಿಬಿಟ್ಟರು.
ಬೆನಕನ ನೆನೆಯುವ, ಆತನ ಮಹಿಮೆಯ ಪೊಗಳುವ ಹಾಡಿನೊಂದಿಗೆ ನಂದಿಯಾದ ಕಾರ್ಯಕ್ರಮ ಹತ್ತಾರು ಮಕ್ಕಳು ಹೆದರದೇ ಹಾಡಿ ಹೊಗಳಿಕೆಗೆ ಪಾತ್ರರಾದರು.ಅಕ್ಕ- ತಮ್ಮರಾದ ಚೈತ್ರ ಮತ್ತು ಕಾರ್ತಿಕ್ ಎತ್ತರದಲ್ಲಿ ವ್ಯತ್ಯಾಸವಿದ್ದರೂ ದ್ವನಿಯಲ್ಲಿ ಮಾತ್ರ ಸರಿತೂಗಿಸಿ ಸೊಗಸಾಗಿ ಹಾಡಿದರು. ಅದನ್ನು ಅವರ ತಂದೆ ನಾಗಶೈಲ ಕುಮಾರ್ ಅವರೇ ಬರೆದಿದ್ದು ಎನ್ನುವ ಹೆಮ್ಮೆ ಅವರಲ್ಲಿ ಎದ್ದು ಕಾಣುತ್ತಿತ್ತು. ನಂತರ "ಓ ನನ್ನ ಚೇತನ" ಹಾಡಿದ ಸಹೋದರಿಯರು ಸಚಿತ ಮತ್ತು ಸಂಜನ.ಚಿಕ್ಕ ಮಕ್ಕಳ ಪುಟ್ಟ ಬಾಯಲ್ಲಿ ಕವನವನ್ನು ರಾಗವಾಗಿ ಹಾಡುವುದು ಕೇಳಲು ಚೆನ್ನಾಗಿತ್ತು. ಮತ್ತೊಮ್ಮೆ ಅಕ್ಕತಮ್ಮನವರ ಜೋಡಿ ಹನಿಗವನಗಳನ್ನು ಜೋರಾಗಿ ಹಾರಿಸಿ ನಗೆಬುಗ್ಗೆ ಎಬ್ಬಿಸಿದ್ದು ಸಹನ ಮತ್ತು ಅಮಿತ್. ಸಂಜನ(ಶ್ರೀಧರ್) ಆದಿತ್ಯ ಮತ್ತು ರಾಘವ್ ತಾವು ಬಾಯಿಪಾಠ ಮಾಡಿದ್ದರೂ ಪರವಾಗಿಲ್ಲ ಸರಳವಾದ ಪದ್ಯಗಳನ್ನು ಸುಲಭವಾಗಿ ಓದಿದ್ದು ಕನ್ನಡ ಶಾಲೆಯ ಶಿಕ್ಷಕರಿಗೆ ಹೆಮ್ಮೆ ತಂದಿತು. ನಿಕಿತ ಮತ್ತು ನಿತ್ಯ ಅತಿ ಸ್ಪಷ್ಟ ಹಾಗೂ ಇಂಪಾಗಿ ಕವನವನ್ನು ಹಾಡಿ ಎಲ್ಲರ ಮೆಚ್ಚುಗೆ ಪಡೆದದ್ದೂ ಅಲ್ಲದೆ ಕಾರ್ಯಕ್ರಮ ಮುಗಿದ ಮೇಲೆ "ಅದ್ಯಾರು ಆ ಮಕ್ಕಳು?" ಎಂದು ಬಂದವರು ಕೇಳುವಂತೆ ಇತ್ತು. ಒಂದು ನಿಸರ್ಗದ ಮೇಲೆ ಮತ್ತೊಂದು ಕನ್ನಡದ ಸ್ವಾಭಿಮಾನ ಕೆಣಕುವ ಕವಿತೆಗಳನ್ನು ಅಂತರ್ಜಾಲದಲ್ಲೇ ಹುಡುಕಿ ತಂದಿದ್ದರು ಈ ಸಹೊದರಿಯರು.ಆನಂತರ ಆಜ್ಞಾ ತನ್ನ ಇಂಪಾದ ಕಂಠಸಿರಿಯಿಂದ ಕವನ ಹಾಡಿದರೆ ಅವಳ ಅವಳಿ ಸಹೋದರ ಆತ್ರೇಯ ತಿಂಡಿಯ ಕವನವನ್ನು ನಗುನಗುತ್ತಾ ಅನುಭವಿಸುತ್ತಾ ಎಲ್ಲರೂ ಸವಿಯುವಂತೆ ಓದಿದ.ಮನೆಯಲ್ಲೆ ಕನ್ನಡ ಕಲಿತಿರುವ ನಿಸ್ಸೀಮ ಪುಟ್ಟ ಕಂದ (ಸ್ಕಂದ) ಆಗತಾನೆ ಬರೆದ ಗಾದೆಗಳನ್ನು ಜನರ ಸಮ್ಮುಖದಲ್ಲೇ ಓದಿದ್ದು ಭೇಷ್ ಎನ್ನುವಂತಿತ್ತು.
ಕಾರ್ಯಕ್ರಮದಲ್ಲಿ ಮುಂದೆ ಸ್ಥಳೀಯ ಹಿರಿಯ ಕವನಕಾರರ ಸರದಿ ಬರುವ ಮೊದಲು ಕನಕಾಪುರ ನಾರಾಯಣ ಅವರು ಕೊಟ್ಟ ಕವನ-ಕಾವ್ಯದ ವಿಶ್ಲೇಷಣೆ ವಿವರವಾಗಿ ವಿಚಾರಾತ್ಮಕವಾಗಿತ್ತು. ಕವಿತೆ-ಕವನ-ಪದ್ಯ ಇವುಗಳು ಎಲ್ಲಾ ಶಾಸ್ತ್ರಕ್ಕನುಗುಣವಾಗಿದ್ದರೆ ಉತ್ತಮ ಕಾವ್ಯಾನಿಸಿಕೊಳ್ಳುತ್ತದೆ ಎನ್ನುವುದನ್ನು ಪರಿಚಯಿಸಿದರು. ಭಾಷೆಯ ಸೊಗಸು - ಸೊಗಡು, ವಾಕ್ಯ- ವರಸೆ, ಅರ್ಥ - ಅಪಾರ್ಥ ಹಾಗೂ ಕನ್ನಡ ಸಂಸ್ಕೃತ ವ್ಯಾಕರಣದಲ್ಲಿ ಬರುವ ಬರೆಯಲಾಗದ ಭಾವನ ಪೂರಕವಾದ ಸ್ವರಿತ,ಉದಾತ್ತ ಮತ್ತು ಅನುದ್ದಾತ್ತಗಳನ್ನು ಅದರ ಪ್ರಯೋಗಗಳನ್ನೂ ಉದಾಹರಣೆಯೊಂದಿಗೆ ತಿಳಿಸಿದರು.
ಮುಂದೆ ಬಹು ನಿರೀಕ್ಷೆ ಇದ್ದ ಕಾರ್ಯಕ್ರಮದ ಅಂಶ ಹಿರಿಯರಿಂದ ರಚಿತ ಕವನಗಳು. ಮೊದಲನೆಯದಾಗಿ ಶ್ರೀಮತಿ ವೀಣಾ ಸುದರ್ಶನ್ ತಮ್ಮ ಎರಡು ಕವನಗಳನ್ನೂ ನಂತರ ಬಿ ಎಂ ಶ್ರೀ ವಿರಚಿತ ಕವನಗಳನ್ನೂ ಕವನ ಓದುವ ಖರೆಯಾದ ರೀತಿಯಲ್ಲಿ ಓದಿ ತೊರಿಸಿದರು. ಎಷ್ಟೇ ಆದರೂ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದರು ಕವನಗಳ ಸನ್ನಿವೇಶಗಳಿಗೆ ಭಾವತುಂಬಿದಾಗ ಕೇಳುಗರ ಹುಬ್ಬೇರಿಸುವಂತಿತ್ತು.ಅವರ ಹಿಂದೆಯೇ ಶ್ರೀಮತಿ ಅನೂ ಶಿವರಾಂ ಅವರು ಹಿಂದೆಂದೋ ಬರೆದ "ದಿಟ್ಟೆ" ಕವನ ಓದುತ್ತೀನಿ ಎಂದಾಗ ಏನಪ್ಪಾ ಅನ್ನಿಸಿತು ಆದರೆ ಅದರ ಹಿನ್ನೆಲೆ ವಿವರ ಕೇಳಿದ ಮೇಲೆ ಈ ಮೊದಲೆ ಓದಿದ್ದರೂ ಮನ ಮಿಡಿಯುವಂತಿತ್ತು.ಅವರ ಬಹಳ ದಿನದಿಂದ ಅಪೂರ್ಣವಾಗಿದ್ದ ಕವನ ಕಾರಿನಲ್ಲೇ ಕೂತು ಬರೆದು ಪ್ರಸ್ತುತಪಡೆಸಿದ್ದೂ ತುಂಬಾ ಚೆನ್ನಾಗಿ ಮೂಡಿಬಂದಿತು.ಕಾರ್ಯಕ್ರಮ ಮುಗಿದ ನಂತರ ಈಮೈಲ್ ಹೊಗಳಿಕೆಗೂ ಶ್ರೀಮತಿ ಅನೂ ಅರ್ಹರಾದವರು ಎಂದು ಸಾಬೀತು ಮಾಡಿದರು. ಆಸ್ಟ್ರೇಲಿಯಾ ಕನ್ನಡ ಗ್ರೂಪ್ ಫೇಸ್ಬುಕ್ ನಲ್ಲಿ ಫೇಮಸ್ ಅನ್ನಿಸಿರುವ ಅಡಿಲೈಡ್ ನ ಶ್ರೀ ಕೃಷ್ಣಪ್ರಸಾದ್ ಅವರ ಕವನಗಳನ್ನು ನಾರಾಯಣ ಅವರೇ ಓದಿದರು. ಚಿಕ್ಕದಾದರೂ ಚೆಲುವಾದ ಕವನ ಬರೆಯುವುದರಲ್ಲಿ ಪ್ರಸಾದ್ ಎತ್ತಿದ ಕೈ. ಕವನಕ್ಕೆ ತಕ್ಕ ಚಿತ್ರಗಳನ್ನೂ ಲಗತ್ತಿಸಿ ಒಬ್ಬ ಮಹಿಳೆಯ ಮನದಾಳ ಬಿಚ್ಚಿಡುವ, ಅಥವಾ ರಮಣಿ ರಸಿಕತೆ ಸುಲಿದಿಡುವ ಸರಳ ಸುಂದರ ಕಾವ್ಯ ಅವರದ್ದು ಎನ್ನುವಂತಿತ್ತು. ಶ್ರೀಮತಿ ಮತ್ತು ಶ್ರೀ ತ್ರಿವೇಣಿ ನಾಗಶೈಲ ಕುಮಾರ್ ಲಾವಣಿ ಶೈಲಿಯ ಕನ್ನಡ ನಾಡು, ನುಡಿ - ತಿಂಡಿ - ತಿನಿಸು ನೆನಪಿಸಿಕೊಡುವ ಕವನ ಇಬ್ಬರೂ ಒಟ್ಟಿಗೆ ಹಾಡಿದರು.ಸಾಕಷ್ಟು ಊರುಗಳ ಹೆಸರೂ ಆಪ್ರಾಂತ್ಯದ ಜನಪ್ರಿಯ ತಿಂಡಿ, ಸ್ಥಳ ಮಹಿಮೆ ಸೊಗಸಾಗಿ ಹೆಣೆದಿದ್ದರು ಕವಿ ಶ್ರೀ ನಾಗಶೈಲ ಕುಮಾರ್ ಅವರು.ಅವರ ಪ್ರವಾಸಾನುಭವದ ತಿರುಳು ಅಡಗಿತ್ತು ಆ ಕವನದಲ್ಲಿ ಎಂದರೆ ಸರಿಯಾದ ಮಾತು ಅನಿಸುತ್ತದೆ.ಕವನ ಓದುವ ಕಡೇಯ ಸರದಿ ಇದ್ದದ್ದು ಶ್ರೀ ಬದರಿ ನಾರಾಯಣ ಅವರದ್ದು.ಹಿಂದಿನ ದಿನ ಜ್ವರದಿಂದ ಬಳಲುತ್ತಿದ್ದ ಅವರು ಕಾರ್ಯಕ್ರಮಕ್ಕೆ ಬರುವುದು ಅನುಮಾನವೇ ಆಗಿದ್ದರೂ ಆರೋಗ್ಯ ಸ್ವಲ್ಪ ಸುಧಾರಿಸಿದ್ದಾಗಿ ಕುಟುಂಬ ಹಾಜರಾದ ಬದರಿ ಅವರ ವಿಷೇಶ ಶೈಲಿ ಬೆರಗು ಮೂಡಿಸಿತು.ಬೇರೆ ಬೇರೆ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ವಿಭಿನ್ನ ಕವನ ಬರೆಯುವ ಹವ್ಯಾಸ ಇವರದ್ದು. ಸಂಗಾತಿಯ ಬಗ್ಗೆ ಸೊಗಸಿನ ಕವನ, ಯಾಂತ್ರಿಕ ಜೀವನದ ಜಂಜಾಟ, ಅಮ್ಮನ ಕರುಳಿನ ಮಮತಾರ್ಪಣೆ ಮತ್ತು ಕಡೇಯದಾಗಿ ಭುವನೇಶ್ವರಿಯ ಬಗೆಗೆ ಬರೆದ ಕವನ ಎಲ್ಲವೂ ಮನಮುಟ್ಟಿತ್ತು. ಕಾರ್ಯಕ್ರಮದ ಅಂತ್ಯವು ಬಂದಿತ್ತು ಎಲ್ಲರ ಚಪ್ಪಾಳೆಯೂ ಸಭಾಂಗಣದಿ ಪ್ರತಿಧ್ವನಿಸಿತ್ತು. ಬದರಿ ಅವರಿಗೆ ಆಸ್ಟ್ರೇಲಿಯಾ ಸಂಗಮ ಟ್ರಾನ್ಸ್ ಪೋರ್ಟ್ ಕಡೆಯಿಂದ ವರ್ಷದ ಕವಿ ಎಂದು ಉಡುಗೊರೆಯೂ ದೊರಕಿತು.
ವಂದನಾರ್ಪಣೆಯನ್ನು ಶಾಲೆಯ ನೂತನ ಮುಖ್ಯ ಅಧ್ಯಕ್ಷರಾದ ಶ್ರೀ ನಾಗೇಂದ್ರ ಅನಂತಮೂರ್ತಿ ತಾವು ಬರೆದ ಪುಟ್ಟ ಕವನದೊಂದಿಗೆ ನಡೆಸಿಕೊಟ್ಟರೆ, ಅತಿಥಿಗಳಾಗಿ ಆಗಮಿಸಿದ್ದ ಶ್ರೀ ನಾರಾಯಣ ಸ್ವಾಮಿ ಮತ್ತು ಶ್ರೀ ಸುರೇಶ್ ಕಾಮತ್ ಭಾಗವಹಿಸಿದವರಿಗೆ ಪುಟ್ಟ ನೆನಪಿನ ಉಡುಗೊರೆ ಕೈಗಿತ್ತರು.ಬಿಸಿಬಿಸಿ ಫಿಲ್ಟರ್ ಕಾಫಿ, ಚಕ್ಕುಲಿ ಸಂಜೆಯ ಕಾರ್ಯಕ್ರಮಕ್ಕೆ ಹೇಳಿಮಾಡಿಸಿದ ಹಾಗಿತ್ತು. ಒಟ್ಟಿನಲ್ಲಿ ಜನ ಈಗಿನ ಕಾಲದಲ್ಲೂ ಈ ಥರದ ಕಾರ್ಯಕ್ರಮಕ್ಕೆ ಬರುತ್ತಾರೆಯೇ? ಎನ್ನುವ ಅನುಮಾನ ಹುಸಿಮಾಡಿ ಕನ್ನಡ ಕವನ ಕಂಪು ಹಸಿಯಾಗಿರುವಂತೆ ಸಂತೋಷ ತಂದಿತ್ತು ಆ ಸಂಜೆ. ಕೆಲವರ ಅನಿಸಿಕೆ ಗಳನ್ನು ಈ ಕೆಳಗೆ ಟೈಪ್ ಮಾಡಲಾಗಿದೆ. ತಾವೇ ಓದಿ ನೋಡಿ,ನಿಮ್ಮನಿಸಿಕೆಗಳಿಗೂ ಅವಕಾಶವಿದೆ.
Feedbacks ಕಾರ್ಯಕ್ರಮಕ್ಕೆ ಆಗಮಿಸಿದವರ ಕೆಲವು ಅನಿಸಿಕೆ
1.ಬಹಳ ದಿನಗಳ ಮೇಲೆ ಕನ್ನಡ ಕವನಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಮ್ತೋಷವಾಯಿತು.ಇದು ಒಳ್ಳೆಯ ಪ್ರಯತ್ನ. ಮುಂದೆಯೂ ಈ ತರದ ಕಾರ್ಯಕ್ರಮ ಬರಲಿ - ರಶ್ಮಿ ಸುರೇಶ್.
2.ತುಂಬಾ ಚೆನ್ನಾಗಿತ್ತು ನಿಮ್ಮ ಶ್ರಮಕ್ಕೆ ಧನ್ಯವಾದಗಳು - ನಾಗೇಂದ್ರ ಗುಬ್ಬಿ.
3.Good try, came out very well.All the best.
4.ಒಳ್ಳೆಯ ಕಾರ್ಯಕ್ರಮ, ದಿಟ್ಟೆ ಕವನ ತುಂಬಾ ಇಷ್ಟವಾಯ್ತು
5.Very well organised.really appreciate the effort behind the thought. Both the parts kids & adults were good.Great effort by kids.Congrads on the success and kindly let us know of any future events planned. -Suresh Kamath.
6.ಕನ್ನಡ ಕಂಪು ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂತು, ನನ್ನ ಹಳೆಯ ನೆನಪುಗಲನ್ನು ಮೆಲಕುಹಾಕಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. - ನಾರಾಯಣ ಸ್ವಾಮಿ.
7.ಕಾರ್ಯಕ್ರಮ ಒಳ್ಳೆ ವಾತಾವರಣ ಮೂಡಿಸಿತ್ತು
8.ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು.ಈ ತರದ ಕಾರ್ಯಕ್ರಮ ಇನ್ನೂ ಹೆಚ್ಚಾಗಿ ಬರಲಿ,ಹೆಚ್ಚಿನ ಜನಕ್ಕೆ ಪ್ರೋತ್ಸಾಹ ಸಿಗಲಿ - ವಿಜೇಂದ್ರ 9.Really a very different programme, some poems were too humerous and some depicted Desha Bhakti. I loved the poem "Ditte" by Anu Shivram the most as it almost bought tears down my cheeks.