![]() | ಯುಗಾದಿ ರಸದೌತಣ 2012ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಕಳೆದ ಏಪ್ರಿಲ್ 14 ಶನಿವಾರ ಸಂಜೆ WattleGrove ಸಾರ್ವಜನಿಕ ಶಾಲೆಯ ಆವರಣದಲ್ಲಿ ಕನ್ನಡ ಶಾಲೆ ಲಿವರ್ಪೂಲ್ ಮತ್ತು ಪಾರಾಮಟ ಶಾಲೆಯ ಮಕ್ಕಳು ಮತ್ತು ಸುಗಮ ಗಾನ ಸಮಾಜದ ಸದಸ್ಯರು ನಡೆಸಿಕೊಟ್ಟ ಕಾರ್ಯಕ್ರಮದ ಪುಟ್ಟ ವರದಿ ಇಲ್ಲಿದೆ.
ಸಂಜೆಯ ತಂಡಿಯ ವಾತಾವರಣ ಆರೂವರೆಗೆ ಶುರು ಆಗಬೇಕಾದ ಕಾರ್ಯಕ್ರಮಕ್ಕೆ ಒಂದು ಘಂಟೆ ಮೊದಲೇ ಜನ ಬಂದು ಸೇರಿದ್ದರು.ಏನಿದು ಒಂದು ಘಂಟೆ ಮೊದಲೇ ಜನ ಎಂದೆಣಿಸಬೇಡಿ, ಬಾಗಿಲ ಬದಿಯಲ್ಲೆ ಶ್ರೀಮತಿಯರಾದ ಸ್ಮಿತಾ ಮತ್ತು ರಾಜಿ ಅವರು ಬಿಸಿಬಿಸಿಯಾಗಿ ಕರೆಯುತ್ತಿದ್ದ ಮೈಸೂರು ಬೋಂಡಾ ಮತ್ತು ಶ್ರೀಮತಿ ತ್ರಿವೇಣಿಯವರು ತಯಾರಿಸಿದ್ದ ಬೆಣ್ಣೆ ಮುರುಕು ಇವೆಲ್ಲಾ ಸವಿದು ನಂತರ ಒಳಹೋಗುವ ಸಜ್ಜು ಮುಂಚೆಯೇ ಆಗಿತ್ತು. ಆರುವರೆ ಆಗುತ್ತಿದ್ದಂತೆ ಉಳಿದ ಬೋಂಡದ ಹಿಟ್ಟನ್ನು ಅಲ್ಲಿಯೇ ಬಿಟ್ಟು ಎಲ್ಲರೂ ಒಳಗೆ ನಡೆದರು.
ದೀಪ ಬೆಳಗಿ ಬೇವುಬೆಲ್ಲದ ಹಂಚಿಕೆಗೆ ನಾಂದಿ ಹಾಡಿದ್ದು ಸ್ಥಳೀಯ ಪುರೋಹಿತರಾದ ಶ್ರೀ ರಾಮಚಂದ್ರ ಆತ್ರೇಯ.ದೀಪ ಬೆಳಗಿದ ಕೂಡಲೇ ಕುಮಾರಿ ನಿರೀಕ್ಷ ಬೆನಕನ ಕುರಿತು ಹಾಡಿದ ಎರಡು ಸಾಲು ಮತ್ತು ಶ್ರೀ ಆತ್ರೇಯಾ ಅವರು ನೀಡಿದ ಪ್ರಸ್ತುತ ವರ್ಷ ನಂದನ ನಾಮ ಸಂವತ್ಸರದ ಸ್ಥಿತಿ-ಗ್ರಹಗತಿ-ಮಾಹಿತಿ ನಂತರ ಶ್ರೀನಿವಾಸ್ ಮತ್ತು ತಂಡದವರು ಹಾಡಿದ ಕೆ ಎಸ್ ನರಸಿಂಹ ಸ್ವಾಮಿ ವಿರಚಿತ "ಹೊಸ ವರುಶದ ಮೊದಲದಿನ "ಸಮೂಹಗೀತೆ, ಕುಮಾರಿ ಸಂಜನ ಹಾಡಿದ "ಯುಗಯುಗಾದಿ ಕಳೆದರೂ" ಎಲ್ಲವೂ ಸಂದರ್ಭಕ್ಕನುಗುಣವಾಗಿತ್ತು. ಕುಮಾರಿ ಪೂಜಾ ಹಾಡಿದ "ಹೂವೂ ಚೆಲುವೆಲ್ಲಾ ತಂದೆಂದಿತು" ಮಧುರವಾಗಿ ಕೇಳಿಬಂದಿತು. ಆ ಸಂಜೆಯ ಹೈಲೈಟ್ ಅಂದರೆ ಸುಮಾರು 18 ಜನ ಗಾಯಕ ಗಾಯಕಿಯರೂ ಮತ್ತು 30 ಕ್ಕೂಹೆಚ್ಚು ಮಕ್ಕಳು ನಡೆಸಿಕೊಟ್ಟ ಕರ್ನಾಟಕದ ಇಪ್ಪತ್ತು ಶತಮಾನದಲ್ಲಿ ಬರುವ ಸುಮಾರು ಗಣ್ಯ ವ್ಯಕ್ತಿಗಳ ಹೆಸರು, ಅವರ ಸಾಧನೆ ಪರಿಚಯ ಮಾಡಿಕೊಡುವ ಲಾವಣಿ ಶೈಲಿಯ ಹಾಡು.ಪ್ರತಿ ಚರಣಗಳ ಮಧ್ಯೆ ಮಕ್ಕಳು ಗಣ್ಯ ವ್ಯಕ್ತಿಗಳ ವೇಷ ಧರಿಸಿ ಅಭಿನಯ, ವಚನಗಳು, ಎರಡು ಸಾಲು ಹಾಡು, ನೃತ್ಯ ಮಾಡಿ ಎಲ್ಲರ ಮನಗೆದ್ದರು.ಗಣಪನ ರಾವಣರ ಇತಿಹಾಸಪೂರ್ವ ಗೋಕರ್ಣ ಮಹಿಮೆಯಿಂದ ಹಿಡಿದು ಪ್ರಸ್ತುತ ಸಾಲುಮರದ ತಿಮ್ಮಕ್ಕನ ವರೆಗೂ ಸಾಧ್ಯವಾದಷ್ಟು ಗಣ್ಯರ ಪರಿಚಯ ಆದಂತಾಯ್ತು.
ರಾವಣನಾಗಿ - ನಿಧಿ ಗಣಪನಾಗಿ-ಧ್ವನಿ ಅಚ್ಚುಕಟ್ಟಾಗಿ ನಟಿಸಿದರೆ, ಇಮ್ಮಡಿ ಪುಲಿಕೇಶಿಯಾಗಿ – ದೀಪಕ್ ಮಿಂಚಿನಂತೆ ಮೈನವಿರೇಳಿಸುವಂತೆ ಮಾತುಗಳಾಡಿದನು, ಬಸವಣ್ಣನಾಗಿ - ಧನುಶ್ ಪಟಪಟನೆ ವಚನ ಹೇಳಿದ್ದು ತುಂಬಾ ಚೆನ್ನಾಗಿತ್ತು. ಇನ್ನು ಅಕ್ಕ ಮಹಾದೇವಿಯಾಗಿ - ಸಿಂಚನ ಮಹೇಶ್ ಸುಲಭ ಸ್ಪಷ್ಟವಾಗಿ ವಚನವೊಂದನ್ನು ಹೇಳಿದಳು, ಹೊಯ್ಸಳನಾಗಿ ಅಮಿತ್ ಆತನ ಗುರುವಾಗಿ ದೃವ ಹೊಯ್ಸಳ ಲಾಂಚನದ ಮೂಲ ಸಂಗತಿಯ ನಟನೆ ಮಾಡಿದರೆ, ವಿಷ್ಣುವರ್ಧನನ ಪಾತ್ರದಲ್ಲಿ ಸಂಜನ ಕುಲಕರ್ಣಿ ಮತ್ತು ನಾಟ್ಯರಾಣಿ ಶಾಂತಲೆಯ ಪಾತ್ರದಲ್ಲಿ - ನೈಮಿಷ ತನ್ನ ಹವ್ಯಾಸವಾದ ಭರತನಾಟ್ಯವನ್ನೇ ಪ್ರದರ್ಶನ ನೀಡುವ ಅವಕಾಶ ಒದಗಿಬಂದಿತ್ತು. ಮುಂದೆ ಕೃಷ್ಣದೇವರಾಯನಾಗಿ ವೇದಿಕೆಗೆ ಬಂದ – ಅಮೋಘ ತನ್ನ ಚುರುಕು ಸಂಭಾಷಣೆ ಯಿಂದ ಚಪ್ಪಾಳೆ ಗಿಟ್ಟಿಸಿದ. ಶಾಲೆಯ ಮುದ್ದು ಕುಮಾರಿ ಸ್ವಾತಿ - ಮಧ್ವಾಚಾರ್ಯರ ಶ್ಲೋಕ ವಂದ್ಯೇವಂದ್ಯಂ ನಿರ್ಭಯವಾಗಿ ಹೇಳಿ ಎಲ್ಲರ ಮೆಚ್ಚುಗೆ ಪಡೆದಳು. ಪುರಂದರ ದಾಸನ ಪಾತ್ರಧಾರಿ – ಪ್ರಣವ್ ಇಟ್ಟಿಗೆಮೇಲೆ ಎಂಬ ದಾಸರ ಹಾಡು ಹಾಡಿದರೆ, ಕನಕದಾಸನಾಗಿ - ಸಿಂಧು ಬಾಗಿಲನು ತೆರೆದು ಸೊಗಸಾಗಿ ಗಾಡಿ ಗೋಡೆಯ ಕಡೆ ತಿರುಗಲು ಅಲ್ಲಿ ಗೋಡೆಯೊಡೆದು ಮುದ್ದು ಕೃಷ್ಣ ಕಾಣಿಸಿಕೊಂಡಿದ್ದು ಅಚ್ಚರಿಗೊಳಿಸುವಂತಿತ್ತು, ಕೃಷ್ಣನ ಪಾತ್ರ - ಆರ್ಯನಿಗೆ ಚೆನ್ನಾಗಿ ಒಪ್ಪುವಂತಿತ್ತು. ಸರ್ವಜ್ಞನ ವಚನ ಹೇಳಿದವನು ಕನ್ನಡ ಶಾಲೆಯ ಚುರುಕಾದ ಬಾಲಕ – ಪಾರ್ಥ. ಇಡೀ ಪ್ರೇಕ್ಷಕರ ಮನಸೆಳೆದದ್ದು (ಮೈಕ್ ಇಲ್ಲದೇ) ಕೊನೆಯಲ್ಲಿ ಕುಳಿತವರಿಗೂ ಕೇಳುವಹಾಗೆ, ಮೈನವಿರೇಳುವ ಹಾಗೆ ಬ್ರಿಟೀಷರಿಗೇಕೆ ಕೊಡಬೇಕು ಕಪ್ಪ ಎಂದು ಶೌರ್ಯದಿಂದ ನುಡಿದ ಮಾತುಗಳು ಕಿತ್ತೂರ ಚೆನ್ನಮ್ಮ ಚಿತ್ರದ ಬಿ ಸರೋಜಾ ದೇವಿಯವರನ್ನು ನೆನಪಿಗೆ ತಂದಿತು - ಸುಕೃತಿ ಯ ಈ ಅಭಿನಯಕ್ಕೆ ಚಪ್ಪಾಳೆ ಶಿಳ್ಳೆಗಳು ಮುಗಿಲುಮುಟ್ಟಿದವು. ಒನಕೆ ಓಬವ್ವನಾಗಿ – ಮೇಘನ, ರಾಣಿ ಅಬ್ಬಕ್ಕನಾಗಿ ವಿಭಾ"ಪೋರ್ಚುಗೀಸರನ್ನು ಅಟ್ಟೋಣ"ಎಂದು ಹೇಳುವುದನ್ನು ಮರೆತರೂ ಕೆಳದಿಯ ಚನ್ನಮ್ಮನಾಗಿ - ಸಿಂಚನ ಭೂಷಣ್ "ನಾಡನ್ನು ಕಟ್ಟೋಣ"ಎಂದು ಹೇಳಿದ್ದು ನೋಡುಗರಿಗೆ ಮುದನೀಡಿತು.
ಮೈಸೂರು ರಾಜರಾಗಿ - ಸ್ವಾತಿ ಪಡ್ಕಿ, ಬ್ರಿಟೀಶ್ ಅಧಿಕಾರಿಯಾಗಿ– ಸೌಮ್ಯ ಪಡ್ಕಿ, ವಿಶ್ವೇಶ್ವರಯ್ಯನಾಗಿ - ರಾಘವ್ ಜೋಗದ ಜಲಪಾತ ಬಳಿ ಜಲವಿದ್ಯುತ್ ಘಟಕ ಆರಂಭಿಸಿದ ನೆನಪು ತಂದರೆ, ಅರ್ಚಿತ - ಗಣಿತ ತಜ್ಞೆ ಶಕುಂತಲಾ ದೇವಿಯಾಗಿ ಪ್ರೀತಿ ಕೇಳಿದ ದೊಡ್ಡ ಲೆಕ್ಕಕ್ಕೆ ಉತ್ತರ ನೀಡಿದಳು. ಭೀಮ್ಸೇನ್ ಜೋಶಿಯಾಗಿ - ಆದಿತ್ಯ ಭಾಗ್ಯದ ಲಕ್ಷ್ಮಿಬಾರಮ್ಮ ಹಾಡಿನ ಎರಡು ಸಾಲು ಹಾಡಿದನು. ನಿಶಧಿ(ಸಂಚಿಯ ಹೊನ್ನಮ್ಮ), ಅಂಶುಲ(ವಿ ಕೃ ಗೋಕಾಕ್) ಅರ್ಜುನ್( ಚಂದ್ರ ಶೇಖರ ಕಂಬಾರ್),ಅನೀಶ (ಕುವೆಂಪು), ಶರಧಿ (ಹೆಳವನ ಕಟ್ಟಿ ಗಿರಿಯಮ್ಮ),ಮೈತ್ರಿ(ಸಾಲುಮರದ ತಿಮ್ಮಕ್ಕ) ತಂತಮ್ಮ ಪಾತ್ರಗಳಲ್ಲಿ ಸುಂದರವಾಗಿ ವೇಷಧರಿಸಿ ಕಂಣ್ತುಂಬುವಂತಿತ್ತು. ಮಾಸ್ತಿ ವೆಂಕಟೇಶ್ ಅಯ್ಯಂಗಾರರ ವೇಷ ಬಹಳ ಆಸಕ್ತಿ ವಹಿಸಿ ಪಾತ್ರಕ್ಕೆ ತಕ್ಕ ಪೇಟ,ಕನ್ನಡಕ ಕಚ್ಚೆ,ಕೋಟು ಎಲ್ಲಾ ಹೊಂದಿಸಿ ಧರಿಸಿ ಬಂದದ್ದು ಪೋಷಕರ ಮುತುವರ್ಜಿ ಎದ್ದುಕಂಡಿತು. ಕಡೇಯದಾಗಿ ವೇದಿಕೆಗೆ ಸರ್ವಜ್ಞನಾಗಿ ಕಾಣಿಸಿಕೊಂಡಿದ್ದ ಪಾರ್ಥ ದಿ. ಡಾ ರಾಜ್ ಕುಮಾರ್ ಪಾತ್ರದಲ್ಲಿ ತನ್ನ ಪ್ರತಿಯೊಂದು ಮಾತಿನಿಂದ ಪ್ರೇಕ್ಷಕರಿಗೆ ಅಚ್ಚರಿಯಿತ್ತು ಚಪ್ಪಾಳೆ ಗಿಟ್ಟಿಸಿದ. ಹಿನ್ನೆಲೆಯಲ್ಲಿ ಆತನ ತಂದೆ ಶ್ರೀ ವಿಜೇಂದ್ರ ಅವರೂ ರಾಜರ ಪಾತ್ರಧಾರಿಗಳ ಆಗಮನಕ್ಕೆ ಪರಾಕ್ ಹೇಳಿ ಮತ್ತಷ್ಟು ಖಳೆ ತಂದರು. ಸುಮಾರು ಅರ್ಧಘಂಟೆ ಅವಧಿಯ ಈ ಹಾಡಿನ್ನು ಬರೆದವರು ನಾರಾಯಣ ಕನಕಾಪುರ, ತಬಲದಲ್ಲಿ ಶ್ರೀನಾಥ್ ಕುಳಿತಿದ್ದರೆ ಜಿಲ್ ಜಿಲ್ ತಾಳಕ್ಕೆ ರಾಜೇಶ್ ಹೆಗ್ಗಡೆ ಅದಕ್ಕೆ ಬದ್ಧವಾಗಿ ಜೊತೆಗೂಡಿದ್ದರು.
ನಂತರ ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾಸುದರ್ಶನ್ ಬೇವುಬೆಲ್ಲ ಎನ್ನುವ ವಿಷಯವನ್ನು ಮೂಲವಾಗಿಟ್ಟುಕೊಂಡು ಮನಮುಟ್ಟುವಂತಹ ಕೆಲ ವಿಷಯಗಳನ್ನು ತಿಳಿಸಿಕೊಟ್ಟರು.
ಈ ಬಾರಿ ಕ್ಯಾರೆಯೋಕೆ ಗಾಯಕರು ಬಹಳ ಸುಂದರ ವಾದ ಹಾಡುಗಳನ್ನು ಆಯ್ಕೆ ಮಾಡಿದ್ದುದೂ ಒಂದು ಹೆಚ್ಚುಗಾರಿಕೆಯ ವಿಷಯ.ಶ್ರೀಮತಿ ಪೂರ್ಣಿಮಾ ಕುಡುವಾ ಪಂಚಮ ವೇದ ಹಾಡಿದರೆ, ಶ್ರೀಮತಿ ಅಕ್ಷತಾ ಋತುವಸಂತ ಅಚ್ಚುಕಟ್ಟಾಗಿಯೂ ಇಂಪಾಗಿಯೂ ಹಾಡಿದರು. ಆಂತೋನಿದಾಸ್ ಹಾಡಿದ ಸಂತೋಷಕ್ಕೆ ಹಾಡು ಸೂಪರ್ ಆಗಿ ಮೂಡಿಬಂತು ಅಂದರೆ ತಪ್ಪಾಗಲಾದರು.ಕುಮಾರಿ ಸಿಂಧು ಇಂದು ಎನಗೆ ಗೋವಿಂದ ಎಂಬ ರಾಘವೇಂದ್ರರ ರಚನೆಯನ್ನು ಕ್ಯಾರೆಯೋಕೆ ಜೊತೆ ಶ್ರುತಿ ತಾಳ ತಪ್ಪದೆ ಸೊಗಸಾಗಿ ಹಾಡಿದಳು.ಮೆಲ್ಲಗೆ ನಡೆ ಮೆಲ್ಲಗೆ ಪಿಬಿಎಸ್ ಅವರ old is gold ಹಾಡನ್ನು ಚಂದ್ರಶೇಖರ್ ಹಾಡಿದರು.ರಾಜೇಶ್ ಹೆಗ್ಗಡೆಯವರ ಒಂದೇ ಉಸಿರಂತೆ ನಾನೂ ನೀನೂ ಮತ್ತು ಶ್ರೀನಿವಾಸನ್ ಹಾಡಿದ ಕರ್ನಾಟಕದ ಇತಿಹಾಸದಲಿ ಕಾರ್ಯಕ್ರಮಕ್ಕೆ ಉತ್ತಮ ದರ್ಜೆಯ ಕಿರೀಟ ಗಿಟ್ಟಿಸಿತು.ಕುಮಾರಿ ಸಿರಿ ಹಾಡಿದ ಜಾನಪದ ಹಾಡು ಜೋಗಿ ಕಾಡತಾನ ಸುಮಧುವೂ ತಾಳಕ್ಕೆ ಚಪ್ಪಾಳೆ ತಟ್ಟುವಹಾಗಿತ್ತು.ಕುಸುಮಾಚೇತನ್ ದಂಪತಿಗಳು ಹೊಸ ಚಿತ್ರದಿಂದಾಯ್ದ ನೀನೆಲ್ಲೋ ನಾನಲ್ಲೇ ಯುಗಳಗೀತೆಯನ್ನು ಚೆನ್ನಾಗಿ ಹಾಡಿದರು. ಆಂತೋನಿ ಮತ್ತು ಅವರ ಪತ್ನಿ ಅನಿತಾ ಅವರು ಹಾಡಿದ ನಾನಿನ್ನ ಮರೆಯಲಾರೆ ರಾಜ್ ಲಕ್ಷಿಜೋಡಿಯ ನೆನಪು ಬರುವಂತೆ ಸೊಗಸಾಗಿತ್ತು. ರಾತ್ರಿ ಒಂಭತ್ತರ ವೇಳೆಗೆ ಕಡೆಯ ಹಾಡು ಹೇಳುವ ಭಾಗ್ಯ ದೀಪಕ್ ಗೆ ಕಾದಿತ್ತು.ಪುಟ್ಟ ವಂದನಾರ್ಪಣೆಯನಂತರ ದೀಪಕ್ ಆಯ್ದುಕೊಂಡಿದ್ದ ನಿನ್ನಿಂದಲೇ ಹಾಡು ಕುಳಿತಿದ್ದ ಪ್ರೇಕ್ಷಕರೂ ಸಂತೋಷದಿಂದ ಧ್ವನಿಗೂಡಿಸುತ್ತಿದ್ದುದು ಎದ್ದು ಕಾಣುತ್ತಿತ್ತು.
ಗಾಯಕರ ಪರಿಚಯ ಮಾಡಿಕೊಡುವ ಕೆಲಸವನ್ನು ಶಾಲೆಯ ಮಕ್ಕಳೇ ವಹಿಸಿದ್ದುದು ಮೆಚ್ಚುವ ವಿಷಯವೇ ಸರಿ.ನಿರೀಕ್ಷ,ಆಜ್ಞಾ,ಆತ್ರೇಯಾ,ಸಹನ ಮತ್ತು ತನ್ಮಯ ಕನ್ನಡದಲ್ಲೇ ತಮ್ಮ ಸಾಲುಗಳನ್ನು ಒಪ್ಪಿಸಿದರು.
ಎಲ್ಲಾ ಸವಿದು ಹೊರಗೆ ಬಂದ ಜನರಿಗೆ ಕಮಲಾಪಡ್ಕಿ ದಂಪತಿಗಳು ತಯಾರಿಸಿದ್ದ ಬಿಸಿಬೇಳೆಭಾತ್ ಮೊಸರನ್ನ,ಪ್ರಫುಲ್ಲಾ ದಿವಾಕರ್ ಮತ್ತು ಪೃಥ್ವಿರವಿ ದಂಪತಿಗಳು ಮಾಡಿತಂದಿದ್ದ ಒಬ್ಬಟ್ಟು ಎಲ್ಲವನ್ನೂ ಶಾಲೆಯ ಧನ ಸಹಾಯಕ್ಕಾಗಿ ಎಂದು ಮೊದಲೇ ನಿರ್ಧರಿಸಿದ್ದ ತಟ್ಟೆಗೆ ೫ ಡಾಲರಂತೆ ಕೊಂಡು ತಿನ್ನುಲು ದೊಡ್ಡ ಕ್ಯೂ ನಿಂತಿತ್ತು.ಈ ವರ್ಷ ವಿಷೇಶ ಅಡುಗೆ ಎಂದರೆ ರಷ್ಮಿಸುರೇಶ್ ಅವರ ಮನೆಯಿಂದ ತಂದಿದ್ದ ಚಿರೋಟಿ ಬಲು ರುಚಿಯಾಗಿತ್ತು.
ಅಂದಿನ ಎಲ್ಲಾ ಜವಾಬ್ದಾರಿಯನ್ನು ಶಾಲೆಯ ಮಕ್ಕಳ ಪೋಷಕರೇ ವಹಿಸಿಕೊಂಡು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಾಯ ಹಸ್ತ ನೀಡಿದ ಆಬಾಲವೃದ್ಧರಿಗೂ ಶಾಲೆಯ ಸಮಿತಿ ಈ ಮೂಲಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ