![]() | ರಜ ಮಜ ಪಿಕ್ ನಿಕ್ 2012 |
ಇದೇ 2012 ಜನವರಿ 22 ರಂದು ಬೇಸಿಗೆಯ ದಿನದಂದು ಪ್ರತಿವರ್ಷದಂತೆ ರಜ ಮಜ ಪಿಕ್ ನಿಕ್ ಏರ್ಪಡಿಸಲಾಗಿದ್ದು,ಈ ಬಾರಿ Cesnock ಬಳಿಯಿರುವ ISKON ಶ್ರೀ ಕೃಷ್ಣನ ದೇವಸ್ಥಾನಕ್ಕೆ ಹೋಗಿಬರಲು ಎಲ್ಲ ಪೂರ್ವ ಸಿದ್ಧತೆಗಳು ಅಂದುಕೊಂಡಂತೆ ಅಚ್ಚುಕಟ್ಟಾಗಿ ನೆರವೇರಿತು.
ಬೆಳಿಗ್ಗೆ ಏಳು ಘಂಟೆಗೇ ಜನರೆಲ್ಲಾ ನೆರೆದು ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಬಸ್ಸಿನಲ್ಲಿ ತಂತಮ್ಮ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಶ್ರೀಮದ್ ರಮಾರಮಣ ಗೋವಿಂದಾ, ಗೋವಿಂದ ಎಂಬ ಶಬ್ಧದೊಂದಿಗೆ ನಾಂದಿ ಹಾಡುತ್ತಾ ಹೊರಟಿತು ಬಸ್ಸು.ಕಾರಣಾಂತರಗಳಿಂದ ಬೆಂಡಿ ಬಸ್ ಬದಲಿಗೆ 65 ಜನ ಕೂಡುವ ಬಸ್ ಈಬಾರಿ ಭರ್ತಿಯಾಗಿತ್ತು.M7 ಮೂಲಕ ಚಲಿಸಿದ ಬಸ್ Moony Moony ಸೇತುವೆ ಬಳಿಗೆ ತಿಂಡಿಗಾಗಿ ನಿಲ್ಲಿಸಿದ್ದು ಕೆಲವೇ ನಿಮಿಷದಲ್ಲೇ ಅನ್ನಿಸಿತು.ಕಾರಣ ದಾರಿಯುದ್ದಕ್ಕೂ ಬಿಂಗೋ ಆಟವಾಡಿದ್ದು ಜೂಜಿನ ಮೋಜು ಮಜ ತಂದಿತ್ತು.ಬಿಸಿಬಿಸಿ ಉಪ್ಪಿಟ್ಟು ಕೇಸರಿಭಾತ್ ಬಾರಿಸಿ ಒಂದಷ್ಟು ಫೋಟೋ ತೆಗೆಸಿಕೊಂಡು ಬಸ್ ಏರಿದ ನಂತರ ಬಿಂಗೋದಲ್ಲಿ ಗೆದ್ದವರಿಗೆ ಬಹುಮಾನ ಹಂಚಲಾಯಿತು.ಹಿಂದಿನ ಸೀಟಿನಲ್ಲಿದ್ದ ಮಕ್ಕಳು ದಣಿದಿದ್ದರೂ ಕುಣಿಯುವುದು ಎದ್ದು ಕಾಣುತ್ತಿತ್ತು. ಹನ್ನೊಂದೂವರೆ ಘಂಟೆಗೆ ಇಸ್ಕಾನ್ ತಲುಪಿದ ತಕ್ಷಣ ಆಸಕ್ತರು ವಿಷ್ಣು ಸಹಸ್ರ ನಾಮ,ಭಜನೆ ಹಾಡು ಹಾಡಿ ನಲಿದರೆ ಹನ್ನೆರೆಡೂವರೆಗೆ ಸರಿಯಾಗಿ ಶಂಖನಾದದಿಂದ ಮೊದಲುಗೊಂಡ ಆರತಿ,ಹರೇಕೃಷ್ಣನ ಭಜನೆ ಕುಣಿತ ನೊಡಲು ಚಂದವಾಗಿತ್ತು.ನೆರೆದ ಭಕ್ತರೂ ಸಹ ಅಲ್ಲಿನ ವೃಂದದವರ ಜೊತೆಗೂಡಿ ಕುಣಿದು ದಣಿದರು.ನಂತರ ಭಗವದ್ಗೀತೆಯ ಪಾಠವನ್ನು ಶ್ರೀ ಆದಿಪುರುಶ ದಾಸರು ಇಪ್ಪತ್ತು ನಿಮಿಷ ನಡೆಸಿಕೊಟ್ಟರು.ಅವರ ಮಾತುಗಳು ಅರ್ಥಪೂರ್ಣವಾಗಿಯೂ ಚಿಕ್ಕದಾಗಿಯೂ ಇತ್ತು.ಆಶ್ಚರ್ಯವೆಂದರೆ ಭಗವದ್ಗೀತೆಯ ಯಾವ ಅಧ್ಯಾಯದ ಯಾವ ಶ್ಲೋಕ ಬೇಕೆಂದು ಮಕ್ಕಳನ್ನೇ ಆರಿಸಲು ಹೇಳಿದ್ದು.ಅವರ ಮಾತು ಆಂಗ್ಲಭಾಷೆಯಲ್ಲಿ ಇದ್ದುದರಿಂದಲೂ, ಸರಳವಾಗಿಯೂ ಇದ್ದ ಕಾರಣ ಮಕ್ಕಳೂ ಕುಳಿತು ಆಲಿಸಿದರು.
ಪಾಠ ಆಲಿಸಿ ಹೊರಗೆ ಕಾಲಿಡುತ್ತಿದ್ದಂತೆಯೇ ಘಮಘಮಿಸುವ ಊಟಕ್ಕೆ ಸಾಲು ಉದ್ದವಾಗಿ ಬೆಳೆದಿತ್ತು.ಕೆಂಪಗಿನ ಅನ್ನ,ರುಚಿಕರ ತರಕಾರಿ ಕೂಟು,ಪಾಯಸ, ಹಪ್ಪಳ, ಬಜ್ಜಿ ಹಾಗೂ ವಿಶೇಷ ಪಾನಕ ಭಾರೀ ಭೋಜನವೇ ಆಯಿತು ಸರಿ. ಊಟ ಮುಗಿದ ಕೂಡಲೇ ವಿಶ್ರಾಮಕ್ಕೆ ಶಾಮಿಯಾನ ಕೆಳಗಿನ ತಂಪಾದ ನೆರಳಿನಲ್ಲಿ ಹಾಸಿದ್ದ ಚಾಪೆಗಳು ಹೇಳಿ ಹಾಕಿಸಿದ್ದಂತಿತ್ತು.
ಮೋಡ ಕವಿದ ವಾತಾವರಣ ಇದ್ದ ಆದಿನ ಮಕ್ಕಳಿಗೆ ವಿಶಾಲವಾದ ಹುಲ್ಲಿನ ಮೇಲೆ ಆಡಲು ಸ್ಥಳ ಸಮಯಕ್ಕೆ ಅಭಾವವೇ ಇರಲಿಲ್ಲ.ತುಳಸಿ ಸಸಿಗಳನ್ನು ಹತ್ತಾರು ಹೆಂಗಸರಿಗೆ ಕೊಳ್ಳುವ ಅವಕಾಶ ಅದೃಷ್ಟವೇ ಅನ್ನಬಹುದು.ಕಪ್ಪು ಎಲೆಗಳ ಕೃಷ್ಣತುಳಸಿ ಎನ್ನುವ ಗಿಡಗಳು ಬಹಳ ಮುತುವರ್ಜಿ ವಹಿಸಿ ಬೆಳೆಸಿ ಮಾರಲು ದೇವಸ್ಥಾನದ ಸಮಿತಿ ನಡೆಸುತ್ತಿರುವ ಉತ್ತಮ ಯೋಜನೆ ಇದು.
ನಂತರ ಗೋಪೂಜೆ,ಹಸುವಿನ ಹಾಲುಕರೆಯುವ ಕಾರ್ಯಕ್ರಮಕ್ಕೆ ಎಲ್ಲರೂ ದೇವಸ್ಥಾನದ ಹಿಂದಿನ ಮೈದಾನದ ಬದಿಯ ಗುಡ್ಡಕ್ಕೆ ನಡೆದೆವು.ಪೂಜೆಗೆ ಗಂಗಾ ಮತ್ತು ಅದರ ಕರು ವಾಯು ಮತ್ತು ಹಾಲು ಕರೆಸಿಕೊಳ್ಳಲು......ಸಜ್ಜ್ಜಾಗಿದ್ದವು.ಕೆಲವರು ಪೂಜೆಯಲ್ಲಿ ಪಾಲ್ಗೊಂಡರೆ ಇನ್ಕೆಲವರು ಹಾಲುಕರೆಯುವುದರಲ್ಲು ಭಾಗವಹಿಸಿದರು.ಮಕ್ಕಳು ಹಸುಗಳಿಗೆ ಬಾಳೆಹಣ್ಣು ತಿನ್ನಿಸಿದ್ದೂ ಅಪರೂಪದ ದೃಷ್ಯವೆನಿಸಿತು.
ಹಿಂತಿರುಗಿ ಬಂದನಂತರ ಸ್ವಲ್ಪಕಾಲ ವಿಶ್ರಾಂತು ಪಡೆಯುತ್ತಿದ್ದಾಂತೆಯೇ ಭೇಲ್ ಪುರಿಗೆ ಕೆಲವು ಜನ ಕೈಕೈ ಸೇರಿಸಿ ಸಜ್ಜುಗೊಳಿಸಿದರು.ಕಾಫಿ/ಟಿ, ಮೈಲೋಗಳಿಗೆ ಬಿಸಿ ನೀರು ಕುದಿಯಿತು.ಎಲ್ಲವನ್ನೂ ಸವಿದು ಬಸ್ ಏರಿದೆವು.ಮತ್ತೆ ಗೋವಿಂದಾ ಎನ್ನುವ ಜೈಕಾರ ಜೋರಾಗಿ ಕೇಳಿಬಂದಿತು.
ಯಾರ ಮುಖದಲ್ಲೂ ಸುಸ್ತಾದ ಲಕ್ಷಣ ಕಾಣುತ್ತಿರಲಿಲ್ಲ,ಕನ್ನಡ ಹಿಂದಿ ಹಾಡುಗಳ ಅಂತಾಕ್ಷರಿ ವಾಪಸ್ ಹೊರಟಾಗ ಶುರುವಾದದ್ದು ಎರಡುವರೆ ಘಂಟೆ ಪ್ರಯಾಣ ಬಳಸಿದ್ದರೂ ಮುಗಿಯಲಿಲ್ಲ,ಹೆಣ್ಣುಮಕ್ಕಳ ಹಾಡುಗಳ ಖಜಾನೆ ಖಾಲಿಯಾಗುವ ಸೂಚನೇಯೇ ಕಾಣಲಿಲ್ಲ,ಅವರ ಜೊತೆಗೆ ಹಿರಿಯರೂ ಕೂಡಾ ನಾವೇನು ಕಮ್ಮಿ ಎನ್ನುವಂತೆ ಧ್ವನಿಗೂಡಿಸಿ ಸ್ಪರ್ಧೆಗೆ ಸ್ಪೂರ್ತಿ ಎನಿಸಿದರು.ತಡವಾಗಿದ್ದರೂ ಆಗಾಗಲೇ ಲಿವರ್ಪೂಲ್ ಬಂದೆಬಿಟ್ಟಿತ್ತು,ಬಸ್ ನಿಂದ ಇಳಿಯುತ್ತಿದ್ದಂತೆ ಅವರವರ ಮನೆಯವರು ಕಾರುಗಳನ್ನು ಬಸ್ ಬಳಿಗೇ ತಂದು ನಿಲ್ಲಿಸಿಕೊಂಡಿದ್ದರು.ಅಂತೆಯೇ ಎಲ್ಲರಿಗೂ Pizza ಕೂಡ ಕೈಗಿತ್ತರು.ಒಟ್ಟಿನಲ್ಲಿ ಹೆಸರೇ ಸೂಚಿಸಿದಂತೆ ಈ ರಜೆಯ ಪಿಕ್ನಿಕ್ ಮಜವಾಗಿ ಕಳೆಯಿತು.