![]() | ಸಿಡ್ನಿ ದಸರಾ ಬೊಂಬೆ ಹಬ್ಬ 2011ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಲೇಖನ - ಶ್ರೀಮತಿ ಅನು ಶಿವರಾಂ
ಸಿಡ್ನಿಯಲ್ಲಿ ಅಕ್ಟೋಬರ್ ೨೨ ರಂದು ದಸರಾಹಬ್ಬದ ಆಚರಣೆ.ಇದೇನು? ದಸರಾ ಆರನೇ ತಾರಿಖೇ ಆಗಿಹೋಯ್ತಲ್ಲ! ಎಂದು ಕೇಳ್ತಾ ಇದ್ದೀರಾ?ಹಬ್ಬದ ಸಂಭ್ರಮಕ್ಕೆ ವಾರಂತ್ಯಕ್ಕೇ ಕಾಯಬೇಕು.ಪ್ರತೀ ವಾರಂತ್ಯವೂ ಸಿಡ್ನಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸುರಿಮಳೆ.ಬೇರೆ ಕಾರ್ಯಕ್ರಮಗಳಿಗೆ ತೊಂದರೆ ಆಗದಂತೆ ಒಂದು ದಿನ ಕಾಯ್ದಿರಿಸುವುದು ಒಂದು ಸವಾಲಾಗಿದೆ.
ಸರಿ, ಶರದೃತುವಿನ ಒಂದು ಸುಂದರ ಶನಿವಾರದ ಸಂಜೆ WattleGrove Public school ಸಭಾಂಗಣ ಮಿನಿ ಮೈಸೂರಾಗಿ ಮಾರ್ಪಟ್ಟಿತ್ತು.ಮೈಸೂರರಮನೆಯ ಭವ್ಯ ಚಿತ್ರಪಟದ ಹಿನ್ನೆಲೆಯಲ್ಲಿ ಸಾಲು ಸಾಲಾಗಿ ಜೋಡಿಸಿದ್ದ ಮೆಟ್ಟಿಲಿನ ಅಂತಸ್ತುಗಳು,ಅದರ ಮೇಲೆ ರಾಜನೇರಳೆ ಬಣ್ಣದ ಹಾಸು,ಹಾಸಿನ ಮೇಲೆ ಬೊಂಬೆಗಳ ಸಾಲು.
ಅಂಬಾರಿ ಮೆರವಣಿಗೆ,ವಧೂವರರ ಮದುವೆ ದೃಷ್ಯ,ಮನಸೆಳೆಯುವ ನೂರಾರು ಗಣೇಶನ ಬೊಂಬೆಗಳು,ಇವೆಲ್ಲಾ ಪ್ರತಿವರ್ಷವೂ ನೋಡಿರುವ ನೋಟವೆ. ಹಾಗೆಂದು ಇದರ ಆಕರ್ಷಣೆ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.ಬೊಂಬೆಗೂ ಬಾಲ್ಯಕ್ಕೂ ತುಂಬಾ ಹತ್ತಿರದ ನಂಟು.ಮಕ್ಕಳಿಗೆ ಬೊಂಬೆಗಳ ಬಗ್ಗೆ ಆಕರ್ಷಣೆ,ಅಕ್ಕರೆ ಒಂದು ಕಡಿಮೆಯಾದರೆ,ಹಿರಿಯರಿಗೆ ತಮ್ಮ ಬಾಲ್ಯದ ಸವಿ ನೆನೆಪುಗಳು ಅಲೆಅಲೆಯಾಗಿ ಬಂದು ಹೊಸ ಉಲ್ಲಾಸ ಉತ್ಸಾಹ ತುಂಬಿ ತರುತ್ತದೆ.ಡೈನಸೋರ್ ಪರಿವಾರ,ಮರದ ದೋಣಿ ಇವುಗಳನ್ನು ಬಿಟ್ಟರೆ ಈ ವರ್ಷ ಹೊಸ ಬೊಂಬೆಗಳು ಅಷ್ಟೋಂದು ಕಾಣಲಿಲ್ಲ.
ಈ ಬಣ್ಣದ ಬೊಂಬೆಗಳ ಜೊತೆಗೆ ಸ್ಪರ್ಧೆಯೇ ಎಂಬಂತೆ ನೆಲದ ಮೇಲೆ ರಂಗು ರಂಗಿನ ರಂಗೋಲಿಗಳ ಚಿತ್ತಾರ.ಪ್ರತಿವರ್ಷವೂ ಹೆಂಗಸರು ಬಣ್ಣದ ರಂಗೋಲಿಗಳ ಪ್ರದರ್ಶನ ನಡೆಸುವುದು ವಾಡಿಕೆ.ಈ ಬಾರಿಯೂ ಹಲವಾರು ಸುಂದರ ರಂಗೋಲಿಗಳಿದ್ದವು.ಅಮ್ಮಂದಿರು ಹಾಕುತ್ತಿದ್ದ ರಂಗೋಲಿ ನೋಡಿ ಮಕ್ಕಳಿಗೆ ಅದೇನು ಉತ್ಸಾಹವೊ ತಿಳಿಯದು,ಬಣ್ಣದ ಪುಡಿಯನ್ನು ಕೇಳಿ ಪಡೆದು ತಾವೂ ಹಾಕಲಾರಂಭಿಸಿದರು.ಚುಕ್ಕೆ ಇಟ್ಟು ಹಾಕಲು ಬಾರದಿದ್ದರೂ ನಕಲು ಮಾಡಿ ಸೊಗಸಾಗಿ ಬರೆದು ಬಣ್ಣ ತುಂಬಿದರು.೧,೨,೩ ಎಂದು ಶುರುವಾದ ಜೂನಿಯರ್ ರಂಗೋಲಿಗಳು ಸಂಜೆಯ ಹೊತ್ತಿಗೆ ಇಡೀ ಅಂಗಳದ ತುಂಬ ನಳನಳಿಸುತ್ತಿತ್ತು. ಬೊಂಬೆ ರಂಗೋಲಿ ಸಂಭ್ರಮ ದಾಟಿ ಒಳಗೆ ಬಂದು ಕುಳಿತೆವು.ಕಾರ್ಯಕ್ರಮದ ಎಂ ಸಿ ಶ್ರೀಮತಿ ದೀಪ್ತಿಜಿತೇಂದ್ರ ಅವರು ಸ್ವಾಗತ ಕೋರಿದಾಗ ಕಾರ್ಯಕ್ರಮ ಖಂಡಿತ ಚೆನ್ನಾಗಿರುತ್ತದೆ ಎನ್ನುವ ಭರವಸೆ ಮೂಡಿತು.ದೀಪ್ತಿಯವರ ನಗುಮುಖ,ಸಮಯಸ್ಪೂರ್ತಿ,ಹಾಸ್ಯಪ್ರಜ್ಞೆ,ನಿರರ್ಗಳ ಭಾಷೆ ಇವು ಯಾವುದೇ ವ್ಯಕ್ತಿಯಾದರೂ ಹಾಯಾಗಿ ಮೂರುಘಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಡಬಲ್ಲರು.
ಮನರಂಜನಾ ಕಾರ್ಯಕ್ರಮ ಕು. ಅಂಕಿತಾ ಆನಂದರ ಸುಶ್ರಾವ್ಯ ಹಾಡುಗಾರಿಕೆಯಿಂದ ಶುರುವಾಯ್ತು. ಚಿಕ್ಕ ವಯಸ್ಸಿಗೇ, ಪ್ರಭುದ್ದ ಮನೋಧರ್ಮವನ್ನು ಬೆಳೆಸಿಕೊಂಡಿರುವ ಈ ಹುಡುಗಿ ತನ್ನ ಸೊಗಸಾದ ಸಂಗೀತದಿಂದ ಕೇಳುಗರನ್ನು ಮಂತ್ರ ಮುಗ್ಧರನಾಗಿಸಿದ್ದು ಸುಳ್ಳಲ್ಲ.
ನಂತರ ಶ್ರೀಮತಿ ಅಪರ್ಣ ನಾಗಶಯನ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ. ಸಿಡ್ನಿಯ ಸಂಗೀತವಲಯದಲ್ಲಿ ಚಿರಪರಿಚಿತ ಗಾಯಕಿ.ತಮ್ಮ ತಂದೆ ಶ್ರೀ ಪಂಡಿತ ದಾತತ್ರೇಯ ಗರೂಡರ ಕೆಲವು ಕೃತಿಗಳನ್ನು ಹಾಡಿ,ಆಪರ್ಣ ಎಂದಿನಂತೆ ರಸತುಂಬಿ ಹಾಡಿ ಸಭಿಕರ ಮನಸ್ಸೆಳೆದರು. ಮಧುಕರ ವೃತ್ತಿ ನನ್ನದು ಎಂಬ ಪುರಂದರದಾಸರ ಕೃತಿಯೊಂದಿಗೆ ತಮ್ಮ ಗಾಯನವನ್ನು ಶುರು ಮಾಡಿದ ಶ್ರೀ ರಾಮ ಕುಡುವ ಅವರು ಹಾರ್ಮೋನಿಯಮ್ ಶ್ರುತಿಗೆ ದನಿಗೂಡಿಸುತ್ತ ದಾಸ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸಿದರು. ಒಬ್ಬ ಒಳ್ಳೆಯ ಗಾಯಕ ಸಂಗೀತದ ಭಾವಾನಂದವನ್ನು ಹೇಗೆ ಕೇಳುಗರೊಂದಿಗೆ ಹಂಚಿಕೊಳ್ಳಬಹುದೆಂದು ನಿದರ್ಶಿಸಿದರು. ಈ ಎಲ್ಲರ ಗಾಯನವೂ ಒಳ್ಳೆಯ ಪಕ್ಕವಾದ್ಯ ಇದ್ದದ್ದರಿಂದ ಕಳೆಗಟ್ಟಿತೆಂಬುದು ನಿಜ.
ಶಾಸ್ತ್ರೀಯ ಸಂಗೀತಕ್ಕೂ ಸಿನೆಮ ಸಂಗೀತಕ್ಕೂ ಮಧ್ಯೆ ಭಾವಗೀತೆಯೊಂದು ಸೇತುವೆ ಇದ್ದಂತೆ ಎಂದರೆ ತಪ್ಪಾಗಲಾರದು. ಅದರಂತೆಯೇ ಶ್ರೀ ರಾಜೇಶ್ ಹೆಗ್ಗಡೆ ಮತ್ತು ತಂಡದವರಿಂದ ಭಾವಗೀತೆಗಳ ರಸದೌತಣ.ತರುಣ ಗಾಯಕ ರಾಜೇಶ್ ಆಯ್ಕೆ ಮಾಡಿದ ಹಾಡುಗಳಲ್ಲಿ ಅವರ ಸದಭಿರುಚಿಯು ವ್ಯಕ್ತವಾಗಿತ್ತು. ಯುವ ಪೀಳಿಗೆಯವರೆಂದರೆ ಅಬ್ಬರದ ಸಂಗೀತವೆಂದು ಮೂಗೆಳೆಯುವವರಿಗೆ ಸವಾಲಿನಂತಿತ್ತು!ರಾಜೇಶ್ ಅವರ ಆಯ್ಕೆ ಹಾಡುಗಾರಿಗೆ ಎರಡೂ ಚೆನ್ನಾಗಿತ್ತು. ಭಾವಗೀತೆಗಳ ಗುಂಗಿನಲ್ಲಿ ಮುಳುಗಿದ್ದ ಸಭಿಕರಿಗೆ ಶ್ರೀಮತಿ ಶುಭಶ್ರೀ ರವಿಯವರ "ದೀಪವು ನಿನ್ನದೆ ಗಾಳಿಯೂ ನಿನ್ನದೆ’ ಹಾಡು ಆಪ್ಯಾಯಮಾನ ಎನಿಸಿದ್ದರೆ ಆಶ್ಚರ್ಯವೇನೂ ಇಲ್ಲ. ಕಾರ್ಯಕ್ರಮದ ನಿರ್ವಾಹಕಿ ಶ್ರೀಮತಿ ದೀಪ್ತಿಯವರು ಹೇಳಿದಂತೆ ಶುಭಶ್ರೀಯವರ ಕಾರ್ಯಕ್ರಮ ಕರ್ಣಾನಂದಕರವಾಗಿಯೂ, ನೇತ್ರಾನಂದಕರವಾಗಿಯೂ ಇತ್ತು!
ಇದ್ದಕಿದ್ದಂತೆ ಸಭೆಯೊಳಗೆ ಉತ್ತರ ಕರ್ನಾಟಕದ ವೇಷ ಭೂಷೆ ತೊಟ್ಟು, ತಾಳ, ಮದ್ದಲೆ ಹಿಡಿದು ಹಾಡುತ್ತ ಒಂದು ಗುಂಪು ಒಳಗೆ ಬಂದಾಗ ಕುತೂಹಲ ತಡೆಯಲಾರದ ಸಭಿಕರೆಲ್ಲ ಎದ್ದು ನಿಂತು ನೋಡುತಿದ್ದಂತೆಯೇ ಅ ಗುಂಪು ಸದ್ದು ಗದ್ದಾಲ ಮಾಡಬ್ಯಾಡ್ರೀ ಸಭೆಯೊಳಗ " ಎಂದು ಹಾಡುತ್ತ ವೇದಿಕೆಯನ್ನೇರಿತು. ಸಭಿಕರ ಸೋಜಿಗವನ್ನು ಅರ್ಥಮಾಡಿಕೊಂಡ ಅನಿವಾಸಿ ಕಲಾ ತಂಡದ ನಾಯಕ ಶ್ರೀ ಸುದರ್ಶನ ನಾರಾಯಣರವರು, ತಾವು ಹಾಡಿದ ಎಲ್ಲ ರಂಗಗೀತೆಗಳ ಪರಿಚಯ ಮಾಡಿಕೊಟ್ಟರು. ಖ್ಯಾತ ನಾಟಕಕಾರ ಶ್ರೀ ಚಂದ್ರಶೇಖರ ಕಂಬಾರರಿಗೆ ಜ್ನಾನಪೀಟ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅವರ ನಾಟಕಗಳಿಂದ ಆಯ್ದ ಕೆಲವು ರಂಗಗೀತೆಗಳನ್ನು ಹಾಡಿ ಕಾರ್ಯಕ್ರಮವನ್ನು ರಂಗೇರಿಸಿದರು. ಇದು ಸಿಡ್ನಿ ಕನ್ನಡಿಗರೆಲ್ಲರ ಪರವಾಗಿ ಕಂಬಾರರಿಗೆ ಸಂದ ಅಭಿನಂದನ!
ಮಧ್ಯವಯಸ್ಸಿನ ಗೃಹಸ್ತರು ಗಂಭೀರವಾಗಿರುವುದು ಸಾಮಾನ್ಯ.ಆದರೆ ಅನುದಿನದ ಚಿಂತೆ ಬಿಟ್ಟು ಅವರು ವೇದಿಕೆಯನ್ನೇರಿ ಜಾನಪದ ಹಾಡಿಗೆ ಹೆಜ್ಜೆ ಹಾಕಲು ಶುರು ಮಾಡಿದಾಗ, ಪ್ರೇಕ್ಷಕರಿಗೆ ಕುಶಿಯೋ. ಕುಶಿ.ಅವರ ಹೆಜ್ಜೆಯ ತಾಳಕ್ಕೆ ತಕ್ಕಂತೆ ಚಪ್ಪಾಳೆ ತಟ್ಟುತ್ತಾ ಶ್ರೀಯುತ ಶ್ರೀನಿವಾಸನ್ ಮತ್ತು ತಂಡದವರನ್ನು ಪ್ರೋತ್ಸಾಹಿಸಿದರು.೨೧ನೇ ಶತಮಾನದ ಆಧುನಿಕ ಬದುಕಿನಲ್ಲೂ ಜಾನಪದ ತನ್ನ ಸೊಗಡನ್ನು ಕಳೆದುಕೊಂಡಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂದರೆ ಜನ ಈ ಸರಳ ಸುಂದರ ಗೀತನೃತ್ಯವನ್ನು ಆನಂದಿಸಿದ ರೀತಿ.
ಸಂಜೆಯಿಂದ ಮೊಗ್ಗಿನ ಜಡೆಯ ಭಾರಹೊತ್ತು ಓಡಾಡುತ್ತಿದ್ದ ಚಿಕ್ಕ ಪುಟ್ತ ಹುಡುಗಿಯರು ರಥ ಎಳೆಯುತ್ತಿದ್ದಂತೆ ತಮ್ಮ ನೃತ್ಯದ ಸರದಿ ಎಂದು ಸಂಭ್ರಮದಿಂಡ ವೇದಿಕೆಯನ್ನೇರಿದರು.ಅಂದಹಾಗೆ ಯಾವ ರಥ? ಎಂದು ಕೇಳುತ್ತೀರಾ,ಶ್ರೀ ನಾರಾಯಣ ಕನಕಾಪುರ ಅವರು ಈ ನೃತ್ಯಕ್ಕೆಂದೇ ನಿರ್ಮಿಸಿದ ಚಿಕ್ಕ-ಚೊಕ್ಕ ಮರದ ರಥ.ಅದನ್ನು ಮೆರವಣಿಗೆಯಲ್ಲಿ ತಂದು ಅದರಲ್ಲಿದ್ದ ಮುದ್ದಾದ ಗಣಪತಿಗೆ ಪುಟ್ಟ ಬಾಲಕ ಪೂಜೆ ಸಲ್ಲಿಸಿ ಆರತಿ ಬೆಳಗಿದನು.ಸಿಡ್ನಿ ಕನ್ನಡ ಶಾಲೆ ಲಿವರ್ಪೂಲ್ ಮತ್ತು ಪಾರಾಮಟ ಶಾಲೆಯ ಮಕ್ಕಳು ಮಾಡಿದ ಈ ಸಮೂಹ ಜಾನಪದ ಕುಣಿತ ಇಡೀ ಸಂಜೆಯ ಅತ್ಯಂತ ಆಕರ್ಷಕ ಕಾರ್ಯಕ್ರಮ ಎಂದು ಸಭಿಕರನಿಲ್ಲದ ಕರತಾಡನ ಸಾರಿತು.ನಾಲ್ಕರಿಂದ ಹಿಡಿದು ಹದಿನಾಲ್ಕು ವಯಸ್ಸಿನ ಮಕ್ಕಳ ತಮ್ಮ ಶಿಷ್ಯವೃಂದಕ್ಕೆ ಅವರವರ ವಯಸ್ಸಿಗೆ ತಕ್ಕಂತೆ ಸಂಯೋಜಿಸಿದ್ದರು ಗುರು ಶ್ರೀ ನಾರಾಯಣ ಅವರು.ಮಕ್ಕಳು ಮೂರು ಬೇರೆ ಗುಂಪುಗಳಲ್ಲಿ ನರ್ತಿಸಿದರೂ ಕುಶಲ ಸಂಯೋಜನೆಯಿಂದ ಹಿತವಾಗಿ ಮೂಡಿಬಂದಿತು.ಪುಟ್ಟ ಆರ್ಯನ್ ಎಂಬ ಹುಡುಗನ ತುಂಟ ಹೆಜ್ಜೆಗಳು ಎಲ್ಲರ ಮುಖದಲ್ಲೂ ಮುಗುಳ್ನಗೆ ಮೂಡಿಸಿತ್ತು.ಆಸ್ಟ್ರೇಲಿಯನ್ ಬೆತನಿ ಕರ್ಲ್ ಸಹ ಈ ಜಾನಪದ ಕುಣಿತದಲ್ಲಿ ಭಾಗವಹಿಸಿದ್ದು ವಿಷೇಶ ಆಕರ್ಷಣೆಯಾಗಿತ್ತು. ಶ್ರೀಮತಿಯ್ರಾದ ವೀಣಾ ಮತ್ತು ರಾಜಲಕ್ಷ್ಮಿ ಅವರ ವಸ್ತ್ರಸಂಜೋಜನೆ ನೃತ್ಯಕ್ಕೆ ಮತ್ತಷ್ಟೇ ಮೆರಗುತಂದಿತು. ಪ್ರತಿವರ್ಷವೂ ಸಮುದಾಯದಕ್ಕೆ ಸೇವೆ ಸಲ್ಲಿಸಿರುವ ಪ್ರತಿಭಾನ್ವಿತ ಕನ್ನಡಿಗರೊಬ್ಬರನ್ನು ದಸರಾ ಉತ್ಸವದಲ್ಲಿ ಸಲ್ಮಾನಿಸುವ ಪದ್ಧತಿ ನಡೆದು ಬಂದಿದೆ.ಅದರಂತೆ ಈ ವರ್ಷ ಹಿರಿಯ ಕನ್ನಡಿಗರೂ ಹಾಗೂ ವಿದ್ವಾಂಸರೂ ಆದ ಡಾ|| ಮಧುಸೂದನ ಅವರನ್ನು ಗಾನ ಸಮಾಜದ ಸಮಿತಿ ಗೌರವದಿಂದ ಸನ್ಮಾನಿಸಿತು.ಶ್ರೀ ಮಧುಸೂದನ ಅವರಿಗೆ ಕೊಟ್ಟ "ಸಾಹಿತ್ಯ ಸಂಪನ್ನ"ಎಂಬ ಬಿರುದು ಬಹಳ ಸೂಕ್ತ ಹಾಗೂ ಅನ್ವರ್ಥವಾಗಿತ್ತು. ಇದಾದ ನಂತರ ಮಕ್ಕಳಿಗೆ ಬಹುಮಾನ ಕೊಡುವ ಕೆಲಸ ಚುರುಕಗಿ ಮುಗಿಸಿ,ವಂದನಾರ್ಪಣೆ ಶುರುವಾಗುವಾಗಾಗಲೆ ಹೊರಗಿನ ಅಂಗಳದಿಂದ ಬಿಸಿಬೇಳೆಭಾತ್ ಪರಿಮಳ ತೇಲಿ ಬಂತು.
ಸುಗಮ ಗಾನ ಸಮಾಜವು ಸಿಡ್ನಿಯಲ್ಲಿ ಕ್ಯಾರಿಯೋಕೆ ಗಾಯನವನ್ನು ಪ್ರಚಾರ ಪಡಿಸಿದ ಮೊದಲನೆಯ ಸಂಸ್ಥೆ.ಹಾಗೆನೋಡಿದರೆ ಗಾನ ಸಮಾಜವು ‘ಸುಗಮ ಕನ್ನಡ ಕೂಟ’ದ ಪ್ರಮುಖ ಚಟುವಟಿಕೆಗಳಲ್ಲೊಂದು.ಆಗಾಗ ಈ ತರದ ಕಾರ್ಯಕ್ರಮ ಏರ್ಪಡಿಸಿ ಹಲವು ಎಲೆಮರೆಯ ಗಾಯಕರಿಗೆ ನಾಲ್ಕು ಜನರಮುಂದೆ ಹಾಡುವ ಸ್ಪೂರ್ತಿ,ಒತ್ತಾಸೆ ಕೊಟ್ಟಿದೆ.ಮೊದಲು ಹಾಡಿದ ಶ್ರೀ ರಾಜು ಹಾಗೂ ಸೌಮ್ಯ ಅವರ ಹಾಡು ಎಲ್ಲರ ಮೆಚ್ಚುಗೆ ಪಡೆಯಿತು.ಶ್ರೀ ಆಂತೋನಿಯವರ ಹಾಡಂತೂ ಸಭಿಕರನ್ನು ಎಬ್ಬಿಸಿ ನೆಟ್ಟಗೆ ಕೂರಿಸುವಂತಹ ಪ್ರಭಾವ ಬೀರಿತು.ಗಾನ ಸಮಾಜದ ಯುವಪೀಳಿಗೆಯ ಹೆಸರಾಂತ ಗಾಯಕ ಶ್ರೀ ಚೇತನ್ ಪ್ರೇಕ್ಷಕರ ಶಿಳ್ಳೆ ಚಾಪ್ಪಾಳೆ ಗಿಟ್ಟಿಸಿ ಕಾರ್ಯಕ್ರಮಕ್ಕೆ ಉನ್ನತ ಮಟ್ಟದ ಮನರಂಜನೆಯೊಂದಿಗೆ ಅಂತ್ಯ ಹಾಡಿದರು.
ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸ್ವಯಂ ಸೇವಕರ ತಂಡ ರಾತ್ರಿಯೂಟವನ್ನು ಬಡಿಸಲು ಸಜ್ಜಾಗಿ ನಿಂತರು. ಪ್ರವೇಶದರ, ಊಟದ ದರ ಎನೂ ಇರದಿದ್ದ ಈ ಮುಕ್ತ ಕಾರ್ಯಕ್ರಮದಲ್ಲಿ ರುಚಿಯಾದ ಊಟವನ್ನು ನಗುನಗುತ್ತಾ ಬಡಿಸಿದರು ಸ್ವಯಂಸೇವಕರು.ಹೊಟ್ಟೆತುಂಬಾ ಉಂಡು ಸ್ನೇಹಿತರೊಡನೆ ಹರಟೆ ಹೊಡೆದು,ನೃತ್ಯ-ಗೀತೆಗಳ ಗುಂಗಿನಲ್ಲಿ ಮನೆಯತ್ತ ಹೊರಟಾಗ ಮನ ಗುನುಗುತ್ತಿತ್ತು........ "ಸಿಡ್ನಿಯ ದಸರಾ ಎಷ್ಟೊಂದು ಸುಂದರಾ".......