![]() | ಸಿಡ್ನಿ ಕನ್ನಡ ಶಾಲಾ ದಿನಾಚರಣೆ 2010ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ವರ್ಷ ೨೦೧೦ ರ ಸಿಡ್ನಿಯ ಕನ್ನಡ ಶಾಲಾ ದಿನಾಚರಣೆ ಎಂದಿನಂತೆ ಯಶಸ್ವಿಯಾದುದ್ದಲ್ಲದೇ ಸಡಗರದಿಂದಲೂ ನಡೆಯಿತು. ಬೇಸಿಗೆಯಾದರೂ ಅಷ್ಟೇನೂ ಬಿಸಿಲಿರದ ಶನಿವಾರ ಮಧ್ಯಾಹ್ನ ಮೂರಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಕೆಲನಿಮಿಷಗಳು ತಡವಾಗಿ ಶುರುವಾದರೂ ಸ್ವಾಗತ,ಅತಿಥಿಗಳ ಭಾಷಣ,ಶಾಲೆಯ ವರದಿ ಇನ್ನೂ ಕೆಲವು ಚೊಕ್ಕದಾಗಿ ನಿರೂಪಿಸಲಾಗಿದ್ದು ಎಲ್ಲವೂ ಸರಾಗವಾಗಿ ನಡೆಯಿತು.
ಶ್ರೀಯುತ ನಾಗೇಂದ್ರ ಅವರ ಸ್ವಾಗತ ಭಾಷಣದೊಂದಿಗೆ ನಾಂದಿಯಾದ ಕಾರ್ಯಕ್ರಮ ಶ್ರೀಮತಿ ವೀಣಾ ಸುದರ್ಶನ್ ಅವರ "ಭಾಷೆ ಮತ್ತು ಕಲಿಕೆಯ" ಬಗ್ಗೆ ಸೊಗಸಾದ ಕವನವೊಂದನ್ನು ಉದಾಹರಿತವಾಗಿಟ್ಟುಕೊಂಡು ನೀಡಿದ ವಿವರಣೆ, ಪೋಷಕರು ಮಕ್ಕಳಿಗೆ ಕನ್ನಡ ಕಲಿಸುವ ರೀತಿ ಹಾಗೂ ಉತ್ಸಾಹ, ಕನ್ನಡ ಶಾಲೆಯ ಮಕ್ಕಳು ತರಗತಿಯಲ್ಲಿ ಕನ್ನಡ ಬಳಸುವ ರೀತಿ ಈ ಎಲ್ಲದರ ಬಗ್ಗೆ ಸರಳವಾಗಿ ಎಲ್ಲರಿಗೂ ಅರ್ಥವಾಗುವರೀತಿ ಹೇಳಿದರು. ನಂತರ ಮಾತನಾಡಿದ ಆ ದಿನದ ಮುಖ್ಯಾತಿಥಿಗಳಲ್ಲೊಬ್ಬರಾದ ಶ್ರೀಯುತ ನಾಗಶೈಲ ಕುಮಾರ್ ಅವರು ‘ಜನ ಸಾಮಾನ್ಯರು ವಿದೇಶಿ ಭಾಷೆಗಳನ್ನು ಮಕ್ಕಳಿಗೆ ಕಲಿಸಲು ತೋರಿಸುವ ಆಸಕ್ತಿ, ಕನ್ನಡದ ಮೇಲಿನ ಅಸಡ್ಡೆ’ ಅವುಗಳನ್ನು ಮನ ಮುಟ್ಟುವ ರೀತಿ ಬಿಡಿಸಿ ಹೇಳಿದರು. ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಅಂಬಿಕಾ ಪ್ರಸಾದ್ ಹೊರನಾಡ ಕನ್ನಡತಿ ಎನ್ನುವ ಗುರುತೇ ಸಿಗದ ಹಾಗೆ ಸುಗಮವಾಗಿ ಕನ್ನಡದಲ್ಲಿ ಮಾತನಾಡಿ ಮಕ್ಕಳಿಗಾಗಿ ಪುಟ್ಟ ಕಥೆಯನ್ನು ಹೇಳಿದರು. ನಂತರ ಶ್ರೀ ನಾರಾಯಣ ಅವರ ಲಿವರ್ಪೂಲ್ ಮತ್ತು ಪಾರಾಮಟ ಕನ್ನಡ ಶಾಲೆಯ ಪ್ರಸ್ತುತ ವರ್ಷದ ವರದಿಯನ್ನು ಕೇವಲ ಲೆಕ್ಕಾಚಾರದ ದೃಷ್ಟಿಯಲ್ಲಿ ಹಣಕಾಸಿನ ವರದಿ ಮಾತ್ರವಲ್ಲದೇ ಮಕ್ಕಳ,ಪೋಷಕರ ಮತ್ತು ಉಪಾಧ್ಯಾಯರುಗಳ ಸಿಹಿ-ಕಹಿಗಳ ಅನುಭವದ ವರದಿಯನ್ನೂ ಜನರ ಮುಂದಿಟ್ಟರು.
ಮುಂದೆ ಕಾದಿತ್ತು ಮಕ್ಕಳಿಂದ ಸುಮಾರು ನಲವತ್ತು ನಿಮಿಷಗಳ ಮನರಂಜನೆ ಕಾರ್ಯಕ್ರಮ.ಮೊದಲಿಗೆ ಲಿವರ್ಪೂಲ್ ಕನ್ನಡ ಶಾಲೆಯ ಎಲ್ಲಾ ಮಕ್ಕಳು ಶಾಲೆಯ ಪ್ರಾರ್ಥನೆ ಮತ್ತು ತಿಂಡಿಯ ಹಾಡನ್ನು ಚೆನ್ನಾಗಿ ಹಾಡಿದರು.ಅದರಲ್ಲೂ ತಿಂಡಿಯ ಹಾಡು ನಗುವಿನ ಅಲೆಯೆಬ್ಬಿಸಿ ಎಲ್ಲರ ಮೆಚ್ಚುಗೆ ಪಡೆಯಿತು. ನಂತರ ನಿಕಿತ,ನಿತ್ಯ,ಅಮೋಘ ಮತ್ತು ಪುಟ್ಟ ಸ್ವಾತಿ ಹಾಡಿದ ಹೆಚ್,ಎಸ್.ವೆಂಕಟೇಶ ಮೂರ್ತಿ ಯವರ ದೇಶಭಕ್ತಿ ಗೀತೆ “ಎಲೆಗಳು ನೂರಾರು" ಸೊಗಸಾಗಿ ಕೇಳಿಬಂದಿತು.ಕವಿ ಸೀತಾರಾಮಯ್ಯ ನವರ ಕವನ “ಹೂವಾಡಗಿತ್ತಿ"ಯನ್ನು ತನ್ಮಯ ಸರಾಗವಾಗಿ ಓದಿದಳು.ಕನ್ನಡ ಭಾಷೆಯ ಬಗ್ಗೆ ಹಾಡೊಂದನ್ನು ಹಾಡಿದ ಅಂಕಿತ್ ವೇದಿಕೆಯಲ್ಲಿ ಧೈರ್ಯವಾಗಿ ಮೈಕ್ ಹಿಡಿದು ಸಾಹಿತ್ಯವನ್ನು ನೋಡಿಕೊಳ್ಳದೇ ರಾಗ ವಾಗಿ ಹಾಡಿದ್ದು ಚೆನ್ನಾಗಿತ್ತು. ಇನ್ನು ಬಾಲಕ ಮಾನಸ್ ನಟಿಸಿದ ಮೂಕಾಭಿನಯ “ಆಲೀಬಾಬ ಮತ್ತು ನಲವತ್ತು ಕಳ್ಳರು" ಕೂಡಾ ನೋಡುಗರಿಗೆ ವಿಷೇಶ ಪ್ರತಿಭೆಯ ಪರಿಚಯವಾದಂತಾಯಿತು.
ಪಾರಾಮಟ ಶಾಲೆಯ ಮಕ್ಕಳ ಶಿಶುಗೀತೆಗಳು ಪ್ರೇಕ್ಷಕರನ್ನು ಅಚ್ಚರಿಗೊಳಿಸಿತು.ಕೆಲವೇ ವಾರಗಳ ಹಿಂದೆ ಶುರುವಾದ ಕನ್ನಡ ಶಾಲೆಯಿಂದ ಆಗಲೇ ವೇದಿಕೆಯ ಮೇಲೆ ಕಲಾ ಪ್ರದರ್ಶನ ಎಲ್ಲರ ಮೆಚ್ಚುಗೆ ಪಡೆಯಿತು.ಜಾನ್ನವಿ ಮತ್ತು ಆರ್ಯನ್ ಹಾಡಿದ “ಒಂದುಕಾಗೆ ಬಂದಿತು", ಸುಕ್ರುತಿ ತನ್ನ ಚೆಂದದ ಅಭಿನಯದೊಂದಿಗೆ ಹಾಡಿದ “ಅಜ್ಜಗೆ ಬೇಕು ನಶ್ಯದ ಡಬ್ಬ",ಅನೀಶ್ ಮುದ್ದಾಗಿ ಹಾಡಿದ “ಅವಳ ಹೆಸರು ಪದ್ದು" ಮತ್ತು ಆದಿತ್ಯ ಹಾಡಿದ" ಬಸ್ ಬಂತು ಬಸ್" ಎಲ್ಲವೂ ಅತಿ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡಿತು.ದೀಪಕ್ ಮತ್ತು ದರ್ಶನ್ ಅಭಿನಯದೊಂದಿಗೆ ಹಾಡಿದ “ನಾಯಿಮರಿ ತಿಂಡಿಬೇಕೆ"ಮುದ್ದು ಮುದ್ದಾಗಿ ಜನಮನ ಸೆಳೆಯಿತು.ಕಾರ್ಯಕ್ರಮದ ಕೊನೆಯಲ್ಲಿ ಚಲನ ಚಿತ್ರಗೀತೆಯಾದ “ಜಲಲ ಜಲಲ ಜಲಧಾರೆ" ಹಾಡನ್ನು ನಿರೀಕ್ಷ ಕ್ಯಾರೆಯೋಕೆಯೊಂದಿಗೆ ಬಲು ಇಂಪಾಗಿ ಹಾಡಿ ಸೊಗಸಾದ ಕಂಠ ಪರಿಚಯಿಸಿಕೊಳ್ಳುವ ಹಾಗಾಯಿತು.
ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಾಗಿ ಭಾಗೀರಥಿ ಮತ್ತು ನಿಕಿತ ಪ್ರಶಸ್ತಿ ಪಡೆದರೆ ಭಾರತಿ,ಮೋನಿಶ,ಸಿಂಧು ಮತ್ತು ಆದಿತ್ಯ.ಎಸ್. ವಿವಿಧ ವಿಷಯಗಳಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ಪ್ರಶಸ್ತಿ ಪಡೆದರು.ಮಕ್ಕಳಿಗೆ ಅತಿಥಿಗಳಿಂದ ಪ್ರಶಸ್ತಿ ವಿತರಣೆಯಾದರೆ,ಶಾಲೆಯ ಸ್ವಯಂಸೇವಕರಿಗೆ ಶ್ರೀ ಯುತರಾದ ಅಶೋಕ್ ಮತ್ತು ದಿವಾಕರ್ ಉಡುಗೊರೆ ಹಂಚಿದರು.ಶ್ರಿಯುತ ಶ್ರೀನಿವಾಸ್ ಅವರ ವಂದನಾರ್ಪಣೆಯೊಂದಿಗೆ ಸಂಜಯ್ ನಡೆಸಿಕೊಟ್ಟ ಸಂಪೂರ್ಣ ಕಾರ್ಯಕ್ರಮದ ನಿರೂಪಣೆ ಅಚ್ಚುಕಟ್ಟಾಗಿ ಮುಗಿಯಿತು.
ಮನೆಗೆ ಹೊರಡುವ ಮುನ್ನ ಮಕ್ಕಳಿಗೆ ಚಿಪ್ಸ್ ಚಾಕಲೇಟ್ ಮತ್ತು ಹಿರಿಯರಿಗೆ ಕಾಫಿ ಟೀ ವ್ಯವಸ್ತೆ ಮಾಡಲಾಗಿತ್ತು. ಗಡಿಯಾರ 6 ನ್ನು ಮುಟ್ಟಿದ್ದರೂ ಜನ ಮಕ್ಕಳ ಪ್ರತಿಭೆ ಮೆಲಕು ಹಾಕುತ್ತಾ ನಿಂತಿದ್ದರು.ಇನ್ಕೆಲವರ ಸಹಾಯದಿಂದ ಬಹು ಬೇಗ ಆವರಣ ಸ್ವಚ್ಚವಾಯಿತು. ಕನ್ನಡ ಶಾಲೆಯ ಕಾರ್ಯಕರ್ತರೆಲ್ಲರ ಪರವಾಗಿ ಈ ಮೂಲಕ ಅ ದಿನದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ
ಇಂತಿ - ಕನಕಾಪುರ ನಾರಾಯಣ