![]() | ಸಿಡ್ನಿಯಲ್ಲಿ ಮತ್ತೊಂದು ಕನ್ನಡ ಶಾಲೆಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಸಿಡ್ನಿಯ ನಗರದ ಲಿವರ್ಪೂಲ್ ಬಡಾವಣೆಯಲ್ಲಿ ನಡೆಯುತ್ತಿರುವ ಕನ್ನಡ ತರಗತಿಗಳು ನಿಮಗೆಲ್ಲಾ ತಿಳಿದಿರುವ ವಿಷಯವೇ ಸರಿ.ಇಲ್ಲಿಗೆ ಬೇರೆ ಬೇರೆ ಬಡಾವಣೆಗಳಿಂದ ಮಕ್ಕಳು ಕನ್ನಡ ಕಲಿಯಲು ಬರುತ್ತಿರುವುದನ್ನು ಗಮನಿಸಿ ಸಿಡ್ನಿ ಕನ್ನಡ ಶಾಲೆ ಇಂದು ತನ್ನ ಮತ್ತೊಂದು ಶಾಖೆಯನ್ನು ಉದ್ಘಾಟನೆ ಮಾಡಿತು. ಪಾರಾಮಟ ಗ್ರಂಥಾಲಯದಲ್ಲಿ ಉದ್ಘಾಟನೆಗೊಂಡ ಸಮಾರಂಭದ ಪುಟ್ಟ ವರದಿ ಇಲ್ಲಿದೆ.
ಶನಿವಾರ 30ನೇ ಅಕ್ಟೋಬರ್ 2010 ಬೆಳಿಗ್ಗೆ ಹತ್ತು ಘಂಟೆಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಮಕ್ಕಳು ಬಂದದ್ದು ಎಲ್ಲರ ಮುಖದಲ್ಲಿ ಸಂತಸ ತಂದಿತ್ತು.ಸ್ವಾಗತ ಭಾಷಣದೊಂದಿಗೆ ನಾಂದಿಯಾದ ಸಮಾರಂಭದಲ್ಲಿ ಚಿಕ್ಕ ಪುಟ್ಟ ಭಾಷಣಗಳೇ ಹೆಚ್ಚಾಗಿತ್ತು. ಕು.ಸಿಂಧು ಹಾಡಿದ ಇಂಪಾದ ಪ್ರಾರ್ಥನೆಯ ನಂತರ ದೀಪಬೆಳಗಿದವರು ಸಿಡ್ನಿಯ ಹಿರಿಯರೂ ಹಾಗೂ UIA ನ ಮಾಜೀ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಟರಾಜನ್ ರವರು. ಅವರು ಯುವ ಕಾರ್ಯಕರ್ತರಿಗೆ ಶ್ಲಾಘನೆಯನ್ನು ವ್ಯಕ್ತಪಡಿಸಿ ತಮ್ಮ ಹಿತನುಡಿಗಳಿಂದ ಆಶೀರ್ವದಿಸಿದರು.ಅದಾದ ನಂತರ ಶ್ರೀ ನಾಗೇಂದ್ರ ಮತ್ತು ಶ್ರೀ ರಾಜೇಶ್ ತಮ್ಮ ಪುಟ್ಟ ಭಾಷಣದಲ್ಲಿ ಎಲ್ಲರ ಮನ ಸೆಳೆಯುವ ಹಾಗೆ ಮಾತನಾಡಿದರು.ತಾವು ಈ ಕನ್ನಡ ಸೇವೆಗೆ ಮುಂಬರಲು ಕಾರಣ ಮತ್ತು ಮಕ್ಕಳು ಕನ್ನಡ ಏಕೆ ಕಲಿಯಬೇಕು ಎಂಬುದನ್ನು ಪ್ರೇಕ್ಷಕರ ಮನಮುಟ್ಟುವ ಹಾಗೆ ವಿವರಿಸಿದರು.ಮಕ್ಕಳಿಗೆ ಪುಸ್ತಕ, ಫೈಲುಗಳನ್ನು ಶ್ರೀಯುತರಾದ ಡಾ. ಕೇಶವ ಅವರು ತಮ್ಮ ಅಮೃತ ಹಸ್ತದಿಂದ ಹಾಗೂ ತುಂಬುಹೃದಯದ ಆಶೀರ್ವಾದದಿಂದ ಹಂಚಿದರು. ಶ್ರೀಯುತ ಸಿಡ್ನಿ ಶ್ರೀನಿವಾಸ್ ಅವರು ತಮ್ಮ ಭಾಷಣದಲ್ಲಿ ಕ್ಷೀಣಿಸುತ್ತಿರುವ ಹಾಗೂ ನಶಿಸಿಹೋಗುತ್ತಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡವೂ ಸೇರಿದೆ, ಅದನ್ನು ಎತ್ತಿಹಿಡಿಯುವ ಕೆಲಸಕ್ಕೆ ಕೈ ಹಾಕಿರುವವರಿಗೆ ತಮ್ಮ ಶುಭಾಶಯವನ್ನು ತಿಳಿಸಿದರು.ಅತಿ ಕಡಿಮೆ ಸಮಯದಲ್ಲೇ ಚೊಕ್ಕ ಭಾಷಣ ಮಾಡಿದ ಶ್ರೀ ದಿವಾಕರ್ ಹೇರಳೆ ಅವರು ಸ್ಥಳೀಯರೇ ಆದ್ದರಿಂದ ತಿಂಗಳಿಗೊಮ್ಮೆ ಬಿಡುವು ಮಾಡಿಕೊಂಡು ಸಹಾಯ ಮಾಡುವುದಾಗಿ ಹೇಳಿದರು. ಇನ್ನು ಭಾರತದಿಂದ ಬಂದಿದ್ದ ವೃದ್ಧರೊಬ್ಬರು ಕನ್ನಡ ಭಾಷೆಯ ಇತಿಹಾಸ,ಕಲಿಕೆ ಮತ್ತು ಬಳಕೆ ಬಗ್ಗೆ ಮಾತನಾಡಿ ನಮ್ಮೆಲ್ಲರ ಅಭಿಮಾನ ಕೆರಳಿಸಿ ತಮ್ಮ ಕೈಲಾದ ಸಹಾಯವನ್ನೂ ಮಾಡುವ ಆಶ್ವಾಸನೆ ವ್ಯಕ್ತಪಡಿಸಿದರು.ಎಂದಿನಂತೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡು ಹಿರಿಯರು ಹೊರಗೆ ಹೊರಟ ನಂತರ ಬಂದಿದ್ದ ಮಕ್ಕಳಿಗೆ ಕನ್ನಡ ಕಲಿಸುವ ಕಾಯಕಕ್ಕೆ ನಾಂದಿ ಹಾಡುವಂತಾಯಿತು.ಏನಿದೂ ಕನ್ನಡ ಕಲಿಯಲು ಬಂದರೆ ಮತ್ತದೇ ಭಾಷಣವೇ? ಎಂದು ತಲೆ ಕೆರೆದುಕೊಳ್ಳುತ್ತಿದ್ದ ಮಕ್ಕಳಿಗೆ ಎರಡಕ್ಷರ ಕಲಿಸಿ ಚಾಕಲೇಟು ಕೈಗಿತ್ತಾಗ ಮುದುಡಿದ್ದ ಮುಖ ಅರಳಿದವು. .
ಇತ್ತ ಹೊರಗೆ ಎಂದಿನಂತೆ ಕನ್ನಡಿಗರ ಮೊದಲದಿನದ ಅಭಿಮಾನದ ಮಾತುಗಳು ಉಕ್ಕಿ ಬರುತ್ತಿದ್ದುದು ಕಾಣುತ್ತಿದ್ದರೂ ಅವರ ಆಶ್ವಾಸನೆಗಳು ನಿಜಕ್ಕೂ ಕಾರ್ಯರೂಪಕ್ಕೆ ಬರುವ ಸನ್ನೆಗಳು ಎದ್ದು ಕಾಣುತ್ತಿತ್ತು. ಈಗಾಗಲೇ ಭರ್ತಿಯಾಗಿರುವ ತರಗತಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಾಗಾದರೆ ಎಂದು ಯೋಚಿಸಿ ಈಗ ಕಾದಿರಿಸಿರುವ ಕೊಠಡಿ ಸಾಲದೆ ಬರಬಹುದಾಗಿ ಊಹಿಸಿ, ದೊಡ್ಡದಾದ ಆವರಣ ಹುಡುಕುವ ಕೆಲಸ ಇಂದೇ ಆರಂಭಗೊಂಡಿತು. ಒಟ್ಟಿನಲ್ಲಿ ಸಿಡ್ನಿಯಲ್ಲಿ ಮತ್ತೊಂದು ಕನ್ನಡ ಶಾಲೆ ಆರಂಭಗೊಂಡಿದ್ದು ಸಂತಸದ ಸುದ್ದಿ ಅಲ್ಲವೇ? ಹಾಗನ್ನಿಸಿದ್ದಲ್ಲಿ ಈ ಸುದ್ದಿಯನ್ನು ತಮ್ಮ ಸ್ನೇಹಿತರಿಗೂ ತಿಳಿಸಿ..
ಕನ್ನಡಕ್ಕಾಗಿ ನೀನೇನು ಮಾಡಬಲ್ಲೆ? ಕೈ ಕೊಡಬೇಡ, ಕನ್ನಡಕ್ಕಾಗಿ ಕೈ ಎತ್ತು ಕನ್ನಡಿಗ - ಕನಕಾಪುರ ನಾರಾಯಣ.