![]() | ಕನ್ನಡ ಪಾಠಶಾಲೆ ವಾರ್ಷಿಕ ದಿನಾಚರಣೆ 2009ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಸಿಡ್ನಿಯಲ್ಲಿ ಲಿವರ್ಪೂಲ್ ಸುತ್ತಮುತ್ತಲಿನ ಕನ್ನಡಿಗರ ಪ್ರೋತ್ಸಾಹದಿಂದ ನಡೆಯುತ್ತಿರುವ ಕನ್ನಡ ಪಾಠಶಾಲೆಯ ವರ್ಷ 2009 ರ ಕಡೇ ದಿನದ ಆಚರಣೆ ಸಮಾರಂಭ ಶನಿವಾರ ಡಿಸೆಂಬರ್ 12 ರಂದು ಲಿವರ್ಪೂಲ್ ಮೈಗ್ರೆಂಟ್ ರಿಸೋರ್ಸ್ ಸೆಂಟರ್ ನಲ್ಲಿ ನಡೆದ ಪುಟ್ಟ ವರದಿ ಇಲ್ಲಿದೆ. ಆ ದಿನದ ಕಾರ್ಯಕ್ರಮಕ್ಕೆ ವಿಷೇಶವಾಗಿ ಶ್ರೀಮತಿ ಮತ್ತು ಶ್ರೀ ಅನು ಶಿವರಾಂ ಹಾಗೂ ಶ್ರೀಯುತ ಸಚ್ಚಿದಾನಂದ ಅವರುಗಳು ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮ ಹತ್ತು ನಿಮಿಶಗಳು ತಡವಾಗಿ ಶುರುವಾದರೂ ಎರಡು ತಾಸುಗಳು ಮಕ್ಕಳ ಹಾಡು, ಮಾತು ಮತ್ತು ಅತಿಥಿಗಳ ಸೊಗಸಾದ ಭಾಷಣ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆಯುವಂತಿದ್ದು ಬಲುಬೇಗ ಕಳೆಯಿತು. ಪುಟ್ಟಮಕ್ಕಳು ಶಿಶುಗೀತೆಗಳನ್ನು ಹೇಳಿದರೆ ಏಳೆಂಟು ವರ್ಷದ ಮಕ್ಕಳು ಶಾಲೆಯಲ್ಲಿ ತಾವು ಕಲಿಯುತ್ತಿರುವ ಬಗೆ ತಿಳಿಸಿಕೊಟ್ಟರು. ಇನ್ಕೆಲವರು ತಮಗೆ ತಿಳಿದ ಪುಟ್ಟ ಕಥೆಗಳನ್ನು ಒಪ್ಪಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಅನು ಶಿವರಾಂ ಅವರು ತಮ್ಮ ಭಾಷಣವನ್ನು ಮಕ್ಕಳಿಗಾಗೇ ಹೇಳಿದಂತಿದ್ದರೂ ದೊಡ್ಡವರನ್ನೂ ಕೆಲವು ಕ್ಷಣ ಮೂಕರನ್ನಾಗಿ ಕೇಳುವಂತೆ ಮಾಡಿತು. ಕನ್ನಡ ಭಾಷೆಯನ್ನೇ ಇಪ್ಪತ್ತು ಶತಮಾನಗಳಷ್ಟು ಹಳೆಯ ಮರವನ್ನಾಗಿ ಊಹಿಸಿ ಅದರ ಪಾಲನೆಯನ್ನು ನಮ್ಮ ಪೂರ್ವಜರು ಕಾಪಾಡಿಕೊಂಡು ಬಂದು ಬೆಳೆಸಿದ ಉದಾಹರಣೆಯನ್ನು ಕೊಟ್ಟು, ಈಗಿನ ಪೀಳಿಗೆಯವರಾದ ನಾವುಗಳು ಮಾಡಬೇಕಾದ ಕರ್ತವ್ಯದ ಅರಿವು ಮಾಡಿಕೊಟ್ಟರು. ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಪೈಲ್ ಗಳ ಹಂಚಿಕೆಯ ನಂತರ ಶ್ರೀ ಚಿದಾನಂದ್ ಅವರು ಮಾಡಿದ ಭಾಷಣ ಚಿಕ್ಕದಾದರೂ ಕನ್ನಡಾಭಿಮಾನ ಜಾಗೃತಿ ಮೂಡಿಸುವ ಹಾಗಿತ್ತು. ಕನ್ನಡ ಕಲಿಕೆಯ ಬಗ್ಗೆ ಶಾಲೆಯ ಗುರುಗಳ ಸಮಿತಿಯಲ್ಲೇ ಒಬ್ಬರಾದ ಶ್ರೀಮತಿ ವೀಣಾ ಸುದರ್ಶನ್ ಪೋಷಕರಿಗೆ ಮನದಟ್ಟಾಗುವ ರೀತಿ ವಿವರಿಸಿದರು.
2009 ನೇ ಸಾಲಿನಲ್ಲಿ ಏಳೆಂಟು ಮಕ್ಕಳು ಕನ್ನಡ ಕಲಿಕೆಯ ವಿವಿಧ ವಿಷಯಗಳಲ್ಲಿ ಪ್ರಶಸ್ತಿ ಪಡೆದರು. ಆದರೆ ಮುಖ್ಯವಾಗಿ ವರ್ಷದ ಅತ್ಯುತ್ತಮ ವಿಧ್ಯಾರ್ಥಿ ಪಟ್ಟವನ್ನು ಕುಮಾರಿಯರಾದ ನಿರೋಷ ವಿನ್ಸೆಂಟ್ ಮತ್ತು ಭಾಗೀರಥಿ ಗೋಟ್ಯಾಳ್ ಇಬ್ಬರೂ ಪಡೆದರು.
2009ನೇ ವರ್ಷದ ಲಾಭ-ನಷ್ಟಗಳ ವಹಿವಾಟು, ಶಾಲೆ ನಡೆದುಬಂದ ದಾರಿಯನ್ನು ಕಾರ್ಯಕ್ರಮದ ಅಂತ್ಯದಲ್ಲಿ ಶ್ರೀಯುತ ನಾರಾಯಣ ವಿವರಿಸಿದರು. ಮಕ್ಕಳಿಂದಲೇ ನಡೆಸಿಕೊದಲಾಗಿದ್ದ ಕಾರ್ಯಕ್ರಮದ ಕೊನೆಗೆ ಕು. ತನ್ಮಯ ವಂದನಾರ್ಪಣೆ ನುಡಿದಳು
ಪೋಷಕರೂ ಅತಿಥಿಗಳೂ ಮಕ್ಕಳು ಸೇರಿ ಉಳಿದ ಸಮಯದಲ್ಲಿ ಕುಳಿತಲ್ಲೇ ಮೋಜಿನ ಆಟಗಳನ್ನಾಡಿ ಆದಿನದ ಖರ್ಚಿನ ಹಣವನ್ನೂ ಗಳಿಸಿಕೊಟ್ಟರು.