![]() | ಸಡಗರ ತಂದ ಸಿಡ್ನಿ ದಸರಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಅಕ್ಟೋಬರ್ ೧೦ ವರ್ಷ ೨೦೦೯ ಆಸ್ಟ್ರೇಲಿಯಾದ ಶಾಲಾಮಕ್ಕಳ ಮೂರನೇ ಟರ್ಮ್ ಮುಗಿದು ರಜದ ಖುಷಿಯಲ್ಲಿದ್ದ ಸಮಯವದು.ಎರಡು ವಾರ ರಜೆಯ ಮಧ್ಯದ ವಾರಾಂತ್ಯದಲ್ಲಿ ‘ಸುಗಮ ಗಾನ ಸಮಾಜ’ ಹಮ್ಮಿಕೊಂಡಿದ್ದ ‘ಸಿಡ್ನಿ ದಸರಾ ಬೊಂಬೆ ಹಬ್ಬ, ರಂಗೋಲಿ ಪ್ರದರ್ಶನ ಮತ್ತು ಕನ್ನಡ ಕ್ಯಾರೆಯೋಕೆ ಸಂಜೆ’ ಕಾರ್ಯಕ್ರಮಕ್ಕೆ ಜನರೇನೋ ಭಾರೀ ನಿರೀಕ್ಷೆ ಇಟ್ಟು ಕಿಕ್ಕಿರಿದು ಸೇರಿದ್ದರು.
ಪ್ರತಿವರ್ಷವೂ ಕಾರ್ಯಕ್ರಮದ ಏರ್ಪಾಡಿನಲ್ಲಿ ಏನಾದರೊಂದು ಹೊಸತನದಿಂದ ಜನಕ್ಕರ್ಪಿಸುವ ನಿಟ್ಟಿನಲ್ಲಿ ಈ ವರ್ಷ ಸಮಿತಿಯ ಸದಸ್ಯರು ಬಂದ ಬಂಧುಗಳಿಗೆ ರೆಸ್ಟೋರೆಂಟ್ ಗಳಲ್ಲಿ ಇರುವ ಹಾಗೆ ಹತ್ತು ಜನರಿಗೊಂದರಂತೆ ಟೇಬಲ್ ವ್ಯವಸ್ಥೆ ಮಾಡಿದ್ದುದು ಮೊದಲು ಕುಳಿತುಕೊಳ್ಳುವ ಸಮಯದಲ್ಲಿ ಸ್ವಲ್ಪ ಗಡಿಬಿಡಿ ಎನಿಸಿತು.ಆದರೆ ಸ್ನೇಹಿತರೂ ಹಾಗೂ ಕುಟುಂಬದವರ ಜೊತೆ ಕುಳಿತು ಆಗಿಂದಾಗ್ಗೆ ಟೇಬಲ್ ಗೇ ಬರುತ್ತಿದ್ದ ತಿಂಡಿ ತಂಪು ಪಾನೀಯಗಳನ್ನು ಸವಿಯುತ್ತಿರಲು ಬಹಳ ಜನರಿಗೆ ಖುಷಿಯಿಂದ ಕಾರ್ಯಕ್ರಮ ಅನುಭವಿಸಲು ಅನುಕೂಲವಾಯಿತು.ಇನ್ನು ಕಾರ್ಯಕ್ರಮ ಎಂದಿನಂತೆ ಸ್ವಲ್ಪ ತಡವಾಗಿ ಆರಂಭಗೊಂಡರೂ ಪ್ರದರ್ಶನಕ್ಕಿಟ್ಟಿದ್ದ ದೇವಿಯ ಮುಂದೆ ದೀಪವನ್ನು ಶ್ರೀ ಅಶೋಕ್ ಕುಮಾರ್ ರವರು ಬೆಳಗಿದ ಕೂಡಲೇ ಶ್ರೀಮತಿ ಅಕ್ಷತಾ ಶೆಟ್ಟಿ ಹಾಡಿದ ‘ಹಚ್ಚೇವು ಕನ್ನಡದ ದೀಪ’ ಹಾಡು ಮಧುರ ಸಂಜೆಗೆ ಸುಮಧುರ ನಾಂದಿಯೇ ಎಂದೆನಿಸಿತು.ಶ್ರೀಮತಿ ಅಪರ್ಣಾ ನಾಗಶಯನ ರವರ ಶಿಷ್ಯ ವೃಂದದವರು ನಡೆಸಿಕೊಟ್ಟ ತಬಲಾ ವೃಂದವಾದ್ಯ ಗಿಜಿಗಿಜಿ ಮಾತಾಡುತ್ತಿದ್ದ ಪ್ರೇಕ್ಷಕರನ್ನು ಕೆಲನಿಮಿಶದ ಕಾಲ ಕುತೂಹಲದಿಂದ ಕಣ್ಣಗಲಿಸಿ ನೋಡುವಹಾಗೆ ಮಾಡಿತು.ಚಿರಂಜೀವಿಗಳಾದ ವಿಕಾಸ್, ಕಾರ್ತಿಕ್ ಮತ್ತು ಸೂರಜ್ ಈ ಮೂವರು ಪುಟ್ಟ ಮಕ್ಕಳು ಸ್ವರಗಳನ್ನು ಉಚ್ಚರಿಸಿ, ನಂತರ ತಾಳಕ್ಕೆ ತಕ್ಕಂತೆ ಒಟ್ಟಿಗೇ ತಬಲಾ ನುಡಿಸುತ್ತಿದ್ದುದು ನೋಡುಗರಿಗೆ ಭವಿಷ್ಯದಲಿ ಸಿಡ್ನಿಯಲ್ಲಿ ಕಲಾವಿದರಿಗೆ ಕೊರತೆಯೋ ಇರುವುದಿಲ್ಲ ಎಂಬ ಭರವಸೆ ಮೂಡಿಸಿತು.
ಮಕ್ಕಳು ಕನ್ನಡ ಹಾಡುಗಳನ್ನು ಹಾಡಿ ಹಿಂದಿನ ವರ್ಷಗಳಂತೆ ಈ ಸಲವೂ ಪ್ರೇಕ್ಷಕರ ಮನಸೂರೆ ಮಾಡಿದರು.ಗಾರ್ಗಿ ಮತ್ತು ಧಾತ್ರಿ ಬೆಳ್ಳಾವೆ,ಸಂಜನ ಮಧ್ಯಸ್ಥ,ಭಾವನ,ಸಿರಿ,ಸೌಮ್ಯ, ಸಂಜಯ್ ಅವರುಗಳು ಸೊಗಸಾಗಿ ಹಾಡಿ ಸೈ ಎನಿಸಿಕೊಂಡರೆ ಕು.ಅಂಕಿತ ಮತ್ತು ಚಿ.ಕಾರ್ತಿಕ್ ರಾಜ್ ತಮ್ಮ ಉತ್ತಮ ಗುಣಮಟ್ಟದ ಗಾಯನದ ಪ್ರದರ್ಶನ ನೀಡಿದರು.
ಆ ದಿನ ಕಾರ್ಯಕ್ರಮ ಚೆನ್ನಾಗಿತ್ತು ಅನ್ನುವುದಾದರೆ ಅದಕ್ಕೆ ಮುಖ್ಯ ಎರಡು ಮುಖ್ಯ ಕಾರಣಗಳು ಮೊದಲನೆಯದು ನೃತ್ಯ ಪ್ರದರ್ಶನ ಎರಡನೆಯದು ಊಟ ತಿಂಡಿ.ಅದರಲ್ಲೂ ಮನರಂಜನೆಯ ಮಜ ಮೂಡಿ ಬಂದದ್ದು ಕನ್ನಡ ಪಾಠಶಾಲೆಯ ಪುಟ್ಟ ಮಕ್ಕಳು ಅಭಿನಯಿಸಿದ, ಶ್ರೀಮತಿಯರಾದ ವೀಣಾ ಹಾಗೂ ರಾಜಲಕ್ಷ್ಮಿಅವರು ನಿರ್ದೇಶನ ಮಾಡಿದ ‘ಹಳ್ಳಿಯ ದೃಷ್ಯ’ ನೋಡಲು ನಮ್ಮನ್ನು ನಮ್ಮೂರ ಹಳ್ಳಿಗೇ ಕರೆದೊಯ್ದಂತಿತ್ತು. ವಸ್ತ್ರಾಲಂಕಾರ ಮತ್ತು ರಂಗ ಸಜ್ಜಿಕೆ ಸೊಗಸಾಗಿ ಕಾಣುತ್ತಿತ್ತು.ಶ್ರೀಮತಿ ಚೈತ್ರ ವಿನೋದ್ ನಿರ್ದೇಶನದ ಕೋಲಾಟ ನೃತ್ಯ ಕಣ್ ಕೋರೈಸುವ ವಸ್ತ್ರಾಲಂಕಾರ ತಾಳಬದ್ಧ ಕುಣಿತ ಮಧುರವಾದ ‘ಎಲ್ಲೆಲ್ಲು ಹಬ್ಬ’ ಹಾಡಿಗೆ ಹೇಳಿಮಾಡಿಸಿದ ಹಾಗಿತ್ತು.ಮುಂದೆ ಶ್ರೀ ನಾರಾಯಣ ಕಲಿಸಿದ್ದ ಕನ್ನಡ ಪಾಠಶಾಲೆ ಮಕ್ಕಳು ಕುಣಿದ ‘ಚೆಲ್ಲಿದರು ಮಲ್ಲಿಗೆಯಾ’ಜಾನಪದ ಗೀತೆಗೆ ಕಳಸ,ಕಂಸಾಳೆ,ನಂದಿ ಕೋಲು ಮತ್ತು ಡೊಳ್ಳು ಕುಣಿತವನ್ನೂ ಒಳಗೊಂಡು ಚಪ್ಪಾಳೆಯ ಸುರಿಮಳೆಯನ್ನೆ ಗಿಟ್ಟಿಸಿತು.ಅದಾದ ನಂತರ ಶ್ರೀಮತಿ ಬೀನಾ ರವಿ ನಿರ್ದೇಶಿಸಿದ ನೃತ್ಯ ಮೂರು ಸಿನಿಮಾ ಹಾಡುಗಳನ್ನು ಸೇರಿಸಿ ಯುವಪೀಳಿಗೆಯ ಅಭಿರುಚಿಯ ಝಲಕ್ಕನ್ನೇ ಮುಂದಿಟ್ಟರು.ಬಣ್ಣ ಬಣ್ಣದ ಸುಂದರ ವಸ್ತ್ರಾಲಂಕಾರ, ಲಯಬದ್ಧವಾದ ಕುಣಿತ ಎಲ್ಲರ ಮನ ತಣಿಸಿತು.ತದನಂತರ ಗಂಡಸರು ನಡೆಸಿಕೊಟ್ಟ ‘ಡೊಳ್ಳು ಕುಣಿತ’ ಜಾನಪದ ನೃತ್ಯ ನೋಡಿದವರಿಗೂ ಮಾಡಿದವರಿಗೂ ಮರೆಯಲಾಗದ ಅನುಭವವವೇ ಸರಿ ಅನ್ನಬಹುದು.ವಿಭಿನ್ನ ವೇಷಭೂಷಣ,ಗತ್ತು ಗಮ್ಮತಿನಲ್ಲಿ ಹೆಜ್ಜೆ ಕೂಡಿ ‘ಮಾಯದಂಥಾ ಮಳೆ’ ಹಾಡಿಗೇ ಮೆರುಗನ್ನು ಕೊಟ್ಟಿತು.ಚಿ.ಆದಿತ್ಯ ನೃತ್ಯದ ನಡುವೆ ಊರ ಜಾತ್ರೆಗಳಲ್ಲಿ ಹರಕೆ ಹೊತ್ತವರು ಚಾಟಿ ಏಟನ್ನು ಹೊಡೆದುಕೊಳ್ಳುವ ಹಾಗೆ ಅಭಿನಯಿಸಿದ್ದು, ಅಂತಹ ದೃಶ್ಯವನ್ನು ಭಾರತದಲ್ಲಿ ಕಂಡವರು ಇಲ್ಲಿಯೂ ಅದನ್ನು ಅಳವಡಿಸಿದ್ದನ್ನು ಎಲ್ಲರೂ ಮೆಚ್ಚಿದರು. ಈ ನೃತ್ಯಗಳ ನಡುವೆ ಶ್ರೀಮತಿ ರೇಖಾ ಮತ್ತು ಶ್ರೀಯುತರಾದ ಶ್ರೀನಿವಾಸ್,ಚೇತನ್,ದೀಪಕ್ ಮತ್ತು ರಾಜು ಸೊಗಸಾದ ಹಾಡುಗಳನ್ನು ಆಲಿಸುವ ಅನುಭವ ಮಾಡಿಕೊಟ್ಟರು.
ಶ್ರೀಯುತ ಮುರಳಿರವರು ಮಾಡಿದ್ದ ರುಚಿಕರ ಬಿಸಿಬೇಳೆಭಾತ್, ಮೊಸರನ್ನ, ಮೈಸೂರು ಪಾಕ್ ವಿರಾಮದಲ್ಲಿ ತಿಂದು ಮತ್ತೆ ಕಾರ್ಯಕ್ರಮ ನೋಡಲು ಬಂದವರಿಗೆ ಕಾರ್ತಿಕ್ ರಾಜ್ ತಾನೇ ಸ್ವತಃ ತಯಾರಿಸಿದ್ದ ಕ್ಯಾರೆಯೋಕೆ ಟ್ರಾಕ್ ಮೂಲತಃ ರಘು ದೀಕ್ಷಿತ್ ಹಾಡಿರುವ ‘ನೀನೇ ಬೇಕೂ.....’ಹಾಡು ಅಚ್ಚುಕಟ್ಟಾಗಿ ಮೂಡಿಬಂದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ತಾಂತ್ರಿಕ ದೋಷದಿಂದ ಮುಂಗಾರು ಮಳೆ ಹಿಟ್ ‘ಒಂದೇ ಒಂದು ಸಾರಿ‘ಚಿತ್ರಸಮೇತ ಹಾಡುವುದು ಸಾಧ್ಯವಾಗದೇ ಇದ್ದುದು ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಕೊಂಚ ನಿರಾಶೆ ತಂದಿತು.ಊಟದ ನಂತರ ಸಾದರ ಪಡಿಸಿದ್ದ ಕು.ವೈಷ್ಣವಿ ಮತ್ತು ಲಲಿತಾಂಗಿಯರ ಸಾಮೂಹಿಕ ನೃತ್ಯ ನೋಡುಗರ ಕಣ್ಮನಣಿಸಿತು.ಬಗೆಬಗೆ ಬಣ್ಣದ ಉಡುಗೆತೊಟ್ಟು,ಚುರುಕಾದ ಲಯಬದ್ಧ ಹೆಜ್ಜೆಹಾಕುತ್ತಾ ನುರಿತ ಕಲಾವಿದರಿಗಿಂತ ಎಳ್ಳಷ್ಟೂ ಕಡಿಮೆ ಇಲ್ಲ ಎನ್ನುವ ಹಾಗೆ ಕುಣಿದು ಎಲ್ಲರ ಮೆಚ್ಚಿಗೆಯ, ಚಪ್ಪಾಳೆಗಳ ಸುರಿಮಳೆಯನ್ನೇ ಗಿಟ್ಟಿಸಿದರು.ಈ ರಮಣೀಯ ನೃತ್ಯ ಮುಗಿಯುತ್ತಿದ್ದಂತೆ ವೇದಿಕೆಯಲ್ಲಿ ‘ಸುಗಮ ಗಾನ ಸಮಾಜ’ವು ಈ ವರ್ಷದ ನೆಚ್ಚಿನ ಸ್ಥಳಿಯ ಕನ್ನಡಿಗರನ್ನಾಗಿ ‘ಶ್ರೀ ದಕ್ಷಿಣಾ ಮೂರ್ತಿ’ರವರನ್ನು ‘ಕುಂಚ ಪ್ರವೀಣ’ಎಂಬ ಬಿರುದನ್ನಿತ್ತು ಪ್ರಶಂಸಾ ಪತ್ರದೊಂದಿಗೆ ಸನ್ಮಾನಿಸಿದರು.ಅವರು ಸಮುದಾಯಕ್ಕೆ ನೀಡುತ್ತಿರುವ ಸೇವ್ಯ ಬಗ್ಗೆ ಪರಿಚಯಿಸುವ ಅಗತ್ಯವೇ ಇಲ್ಲ, ಏಕೆಂದರೆ ಸಿಡ್ನಿಯ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲೂ ಅವರ ಕರಕುಶಲ ಕಲೆ ಮಿಂಚುತ್ತಿರುವುದು, ಜನಮನ ಗೆಲ್ಲುತ್ತಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಪ್ರಶಂಸಾ ಪತ್ರವನ್ನು ಶ್ರೀ ಯುತ ಸಿಡ್ನಿ ಶ್ರೀನಿವಾಸ್ ಅವರ ಹಸ್ತದಿಂದ ಸಮಿತಿಯ ಸದಸ್ಯರೆಲ್ಲರ ಸಮ್ಮುಖದಲ್ಲಿ ನೀಡಲಾಯಿತು.
ಅಷ್ಟರಲ್ಲಾಗಲೇ ಬಂದಿದ್ದ ಜನರೆಲ್ಲರಿಗೂ ಐಸ್ ಕ್ರೀಂ ತಿನ್ನುವ ಸರದಿ ಬಂದಿತು, ಜನರು ಕುಳಿತಲ್ಲಿಗೇ ಐಸ್ ಕ್ರೀಂ ಹಂಚಲಾದ ಕಾರಣ ಕಾರ್ಯಕ್ರಮ ಮುಂದುವರೆಯಲು ಯಾವುದೇ ಅಡ್ಡಿ ಆಗಲಿಲ್ಲ. ಪ್ರಶಂಸಾ ಕಾರ್ಯಕ್ರಮ ಮುಗಿಸಿ ವೇದಿಕೆಯ ಮೇಲಿದ್ದವರು ಕೆಳಗಿಳಿದು ಬರುತ್ತಿದ್ದಂತೆ ಶ್ರೀ ವಿಜಯ್ ಮಣಿ ಮತ್ತು ತಂಡದವರು ಮಾಡಿದ ‘ಎಲ್ಲಾ ನೀನೆ ತಾಯೆ’ನೃತ್ಯ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಶಿಳ್ಳೆ ಚಪ್ಪಾಳೆ ‘once more’ ಎಂದು ಪದೇ ಪದೇ ಕೂಗುವಂತೆ ಮಾಡಿತು.ಅದರಲ್ಲೂ ವಿಶೇಷವಾಗಿ ವಿಜಯ್ ಮಣಿ ಕುಣಿತ ಹಾಗೂ ಮುಖದ ಭಾವನೆ ಎಂತಹರನ್ನೂ ಒಮ್ಮೆ ಮೂಕರನ್ನಾಗಿ ಮಾಡಿಸಿತು.ಅದಾದ ನಂತರ ಸೊಗಸಾದ ಯುಗಳಗೀತೆಗಳನ್ನು ಶ್ರೀಮತಿ ಮತ್ತು ಶ್ರೀ ಕುಸುಮಾ ಚೇತನ್ ಹಾಗೂ ಶ್ರೀಮತಿ ಮತ್ತು ಶ್ರೀ ರಚನಾ ರಾಜೇಶ್ ಹೆಗ್ಗಡೆ ಹಾಗೂ ಶ್ರೀಮತಿ ಅನಿತಾಮೂರ್ತಿ ಮತ್ತು ಶ್ರೀ ದೀಪಕ್ ನೀಡಿದರೆ, ಸಮಿತಿಯವರೇ ಆಗಿ ಗಾಯಕರೆನಿಸಿದ ಶ್ರೀ ಸುಬ್ರಮಣಿ ರಾಜ್ ಮತ್ತು ಶ್ರೀ ಶಂಕರ ಮಧ್ಯಸ್ಥ ತಮ್ಮ ಗಾಯನ ಸಾಮರ್ಥ್ಯವನ್ನು ತೋರಿದರು. ಕಾರ್ಯಕ್ರಮ ಅಂತ್ಯವಾಗುವ ವೇಳೆಗೆ ಮಧುರವಾದ ತುಳು ಗೀತೆಯೊಂದನ್ನು ಶ್ರೀಮತಿ ಅಕ್ಷತಾ ಶೆಟ್ಟಿ ಮತ್ತು ಶ್ರೀ ನಿತ್ಯಾನಂದ ನಾಯಕ್ ಹಾಡಿ ಕರಾವಳಿಯ ಸ್ನೇಹಿತರಿಗೆ ಹರ್ಷವನ್ನಿತ್ತರು.ಶ್ರೀ ನಾರಾಯಣ ಅವರು ನಡೆಸಿಕೊಟ್ಟ ವಂದನಾರ್ಪಣೆ ಮತ್ತು Raffle ಬಹುಮಾನದೊಂದಿಗೆ ಈ ವರ್ಷದ ಸಡಗರ ಸಂಭ್ರಮದ ಸಿಡ್ನಿ ದಸರ ಕಾರ್ಯಕ್ರಮ ಅಂತ್ಯಗೊಂಡಿತು.
ಸುಗಮ ಗಾನ ಸಮಾಜವು ಈ ಮೂಲಕ ಎಲ್ಲಾ ಕಲಾವಿದರಿಗೂ ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಸಹಾಯ ಹಸ್ತವನ್ನಿತ್ತ ಎಲ್ಲಾ ಬಂಧು ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದೆ.