![]() | ಮಧುರ ಗೀತೆ ಸಂಗಮಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಸುಗಮಗಾನ ಸಮಾಜದ ಆಶ್ರಯದಲ್ಲಿ ಕಳೆದ 02-05-09 ರಂದು ನಡೆದ ‘ಮಧುರ ಗೀತೆ ಸಂಗಮ’ ಕನ್ನಡ ಕ್ಯರೆಯೋಕೆ ಕಾರ್ಯಕ್ರಮ ವಿಭಿನ್ನ ಹಾಗೂ ವಿಷೇಶವಾಗಿ ಜರುಗಿತು. ಚಳಿಗಾಲ ಇನ್ನೂ ತಿಂಗಳು ಇರುವ ಮುನ್ನವೇ ಮುಸ್ಸಂಜೆಯ ಚಳಿಯಲ್ಲಿ ನಿಗದಿಪಡಿಸಿದ ಸಮಯಕ್ಕೆ ಜನ ನೆರೆದಿರದಿದ್ದ ಕಾರಣ ಕಾರ್ಯಕ್ರಮ ಸ್ವಲ್ಪ ತಡವಾಗಿ ಶುರುವಾದರೂ ಆರಂಭವಾದ ನಂತರ ಸಮಯ ಕಳೆದದ್ದೇ ಅರಿವಿರಲಿಲ್ಲ ಬಂದು ಸೇರಿದ್ದ ಸಂಗೀತಾಸಕ್ತರಿಗೆ.
ಅನುಭವೀ ಕಲಾವಿದರು ತಮ್ಮ ಗಾಯನ ಕೌಶಲವನ್ನು ತೋರುವುದಿರಲಿ ಹೊಸ ಗಾಯಕರು ಹಾಡಿದ ಕ್ಷಣ ಎಲ್ಲರಲ್ಲೂ ನವಚೈತನ್ಯವನ್ನು ಮೂಡಿಸಿತು. ಕುವೆಂಪು ವಿರಚಿತ ‘ಎಲ್ಲಾದರು ಇರು‘ ಪುಟ್ಟ ಬಾಲಕಿ ಮಿಲಿ ದಕ್ಷಿಣಾಮೂರ್ತಿ ಹಾಡಿದ್ದು ಸೊಗಸಾದ ಆರಂಭ ಎನಿಸಿತು.ಅಂತೆಯೇ ಸ್ವಲ್ಪ ದೊಡ್ಡ ಮಕ್ಕಳಾದ ಕವಿತಾ,ಕಾರ್ತಿಕ್ ರಾಜ್ ಮತ್ತು ಸೌಮ್ಯ ಎಂದಿನಂತೆ ಉತ್ತಮವಾದ ಹಾಡಿನ ಆಯ್ಕೆ ಹಾಗೂ ಗಾಯನದಿಂದ ಎಲ್ಲರ ಮೆಚ್ಚುಗೆ ಪಡೆದರು.ಸಮಾಜದ ಸಮಿತಿಯ ಸದಸ್ಯರಾದ ಸುಬ್ರಮಣಿ ರಾಜ್(ನಿನ್ನ ನೋಡಲೆಂತೋ) ಮತ್ತು ಶಂಕರ ಮಧ್ಯಸ್ಥ (ಬಿಸಿಲಾದರೇನು)ಅವರುಗಳು ಬಹಳ ಭಾವ ತುಂಬಿ ಎಲ್ಲರ ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಅತಿ ಮುಖ್ಯವೆನಿಸಿದ್ದು ಹೊಸ ಪ್ರತಿಭೆಗಳ ಪರಿಚಯ.ಸಕಲರಿಗೂ ನವ ಗಾಯಕ ಗಾಯಕಿಯರನ್ನು ನೋಡುವ-ಕೇಳುವ ಕುತೂಹಲದ ಕಾತುರ ಇತ್ತು.ಆ ನಿರೀಕ್ಷೆಯನ್ನು ಮೀರಿ ಮನಮುಟ್ಟುವ ಹಾಗೆ ಹಾಡಿದ ಗಾಯಕಿ ಶ್ರೀಮತಿ ಅಕ್ಷತಾ ಶೆಟ್ಟಿ.ಅವರು ಹಾಡಿದ ‘ಋತು ವಸಂತ’ ಎಂಬ ಭಾವಗೀತೆ ನಿಜಕ್ಕೂ ಭಾವ ಪೂರ್ಣವಾಗಿತ್ತು. ಅವರ ನಂತರ, ಹಾಡು ಹಾಡುತ್ತಿರುವಂತೆಯೇ ಪ್ರೇಕ್ಷಕರಿಂದ ಹೆಚ್ಚು ಚಪ್ಪಾಳೆ ಜೊತೆಗೂಡಿಸಿಕೊಂಡ ಹಾಡಿದ ಹೆಗ್ಗಳಿಕೆ ಶ್ರೀ.ಬಸವರಾಜ್ ಮತ್ತು ಶ್ರೀ.ದೀಪಕ್ ಅವರಿಗೆ ಸಂದಿತು.ಇತ್ತೀಚಿಗಷ್ಟೇ ಸಿಡ್ನಿಗೆ ಆಗಮಿಸಿರುವ ಕಲಾವಿದ ದಂಪತಿಗಳಾದ ಶ್ರೀಯುತ ರಾಜೇಶ್ ಹೆಗ್ಗಡೆ ದಂಪತಿಗಳು ತಮ್ಮ ಸೊಗಸಾದ ಹಾಡಿನ ಆಯ್ಕೆ ಮತ್ತು ಭಾವಭರಿತ ಹಾಡುಗಾರಿಕೆಯಿಂದ ನೆರೆದಿದ್ದವರ ನೆಚ್ಚಿನ ಗಾಯಕ ದಂಪತಿಗಳು ಎನಿಸಿದರು.ಶ್ರೀ ರಾಜೇಶ್ ಹೆಗ್ಗಡೆ ಅವರು ‘ಜಿಎಸ್’ ವಿರಚಿತ ‘ಎದೆ ತುಂಬಿ ಹಾಡಿದೆನು’ ಭಾವ ತುಂಬಿ ಹಾಡಿದಾಗ ಸಭಿಕರ ಮನತುಂಬಿದಂತಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ರಾಜೇಶ್ ಹೆಗ್ಗಡೆಯವರೇ ಮುಂಗಾರು ಮಳೆ ಚಿತ್ರದ ಫಾಸ್ಟ್ ಬೀಟ್ಸ್ ಇರುವ ‘ಒಂದೇ ಒಂದು ಸಾರಿ’ಹಾಡಿದಾಗ ವಿವಿಧ ರೀತಿಯ ಸಂಯೋಜನೆಯ ಗೀತೆಗಳನ್ನು ಹಾಡುವ ಸಾಮರ್ಥ್ಯ ಅವರಿಂದ ಕಂಡಂತಾಯಿತು.ಶ್ರೀಮತಿ ರಚನಾ ಹೆಗ್ಗಡೆಯವರು ಬಹಳ ಇಂಪಾಗಿ ಹಾಡಿದ ‘ಚೆಲುವಿನ ಚಿತ್ತಾರ’ ಚಿತ್ರದ ‘ಉಲ್ಲಾಸದ ಹೂಮಳೆ’ ಒಳ್ಳೆಯ rythem ನಿಂದ ಕೇಳುಗರಿಗೆ ಮುದ ನೀಡಿತು.
ಶ್ರೀಮತಿ ವಿಜಯ ಮತ್ತು ಶ್ರೀ ಮಂಜುನಾಥ್ ಹಾಡಿದ ‘ಚಿತ್ರಾನಾ ಚಿತ್ರಾನಾ’, ಶ್ರೀಮತಿ ಪರಿಮಳ ಹಾಡಿದ‘ ಓ ನಲ್ಮೆಯ ನಾವಿಕನೆ’ ’ಹೊಸ ಚಿತ್ರದಿಂದ ಆಯ್ದ ಹಾಡಾಗಿದ್ದರೆ, ಶ್ರೀಮತಿ ಸೀಮಾ ಮತ್ತು ಶ್ರೀ ಮಂಜು ಹಾಡಿದ ‘ತಂನಂ ತಂನಂ’ ಹಳೆಯದು ಹೊನ್ನು ಎನ್ನುವ ಹಾಗೆ ಎಲ್ಲವೂ ಬಹಳ ಚೆನ್ನಾಗಿ ಮೂಡಿಬಂದಿತು.
ಇನ್ನು ಎಲ್ಲರೂ ಎದಿರು ನೋಡುತ್ತಿದ್ದ ಸುಗಮ ಗಾನ ಸಮಾಜದ ನೆಚ್ಚಿನ ಗಾಯಕರಾದ ಶ್ರೀಯುತರಾದ ರಾಜು, ದೀಪಕ್ ಮತ್ತು ಚೇತನ್ ಎಂದಿನಂತೆ ತಮ್ಮ ಸೊಗಸಾದ ಕಂಠದಿಂದ ಕೇಳುಗರಿಗೆ ಆನಂದ ತರುವಂತೆ ಹಾಡಿದರು.ಕಾರ್ಯಕ್ರಮದ ಆರಂಭದಲ್ಲಿ ಶ್ರೀ ನಾರಾಯಣ ಅವರು ಕೋರಿದ ಸ್ವಾಗತ ಮತ್ತು ಅಂತ್ಯದಲ್ಲಿ ಶ್ರೀ ಸುಬ್ರಮಣಿ ರಾಜ್ ಅರ್ಪಿಸಿದ ವಂದನೆ ಎರಡೇ ನಿಮಿಷಗಳನ್ನು ತೆಗೆದುಕೊಂಡಿದ್ದು ಬಿಟ್ಟರೆ ತಡೆರಹಿತ ಗಾಯನ ಕೇಳುಗರು ಕುರ್ಚಿಯಿಂದೆದ್ದು ಹೋಗಲಾರದಂತಾಯಿತು.ಒಬ್ಬರಿಗಿಂತೊಬ್ಬರು ಸುಮಧುರವಾಗಿ ಹಾಡಿದ್ದು, ಹಿರಿಯ ಹಾಗೂ ನೂತನ ಗಾಯಕರ ‘ಮಧುರ ಗೀತೆ ಸಂಗಮ’ವೇ ಎಂಬ ಬಿರುದನ್ನು ನಿಜವೆಂಬಂತೆ ಮಾಡಿತು.ಇವೆಲ್ಲಾ ಮುಗಿಯುವ ವೇಳೆಗಾಗಲೇ ಸಮಯ ರಾತ್ರಿ ಒಂಭತ್ತಾಗಿತ್ತು.ಬಿಸಿ ಬಿಸಿಯಾದ ರುಚಿಕರ ಭೋಜನ ಉದರಕ್ಕೆ ತೃಪ್ತಿ ತಂದಿತು.
ಸುಗಮ ಗಾನ ಸಮಾಜ ಮುಂದೆ ೦೯ ರ ಅಕ್ಟೋಬರ್ ತಿಂಗಳಿನಲ್ಲಿ ಅದ್ದೂರಿ ದಸರಾ ಮಹೋತ್ಸವವನ್ನು ಭಾರೀ ವಿಭಿನ್ನ ಹಾಗೂ ವಿಜೃಂಬಣೆಯಿಂದ ಆಚರಿಸುವ ಯೋಜನೆ ಹಾಕಿಕೊಂಡಿದ್ದು ಈ ಮೂಲಕ ಬೊಂಬೆ ಹಾಗೂ ರಂಗೋಲಿ ಇಡುವುದರಲ್ಲಿ ಆಸಕ್ತರು ಮುಂಗಡವಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ.