![]() | ಚಾರಣ ಸಾಹಸಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
Bush walking Adventure in Blue mountains
ಲೇಖನ - ಶ್ರೀಮತಿ ಪ್ರತಿಭಾ ಅಶೋಕ್
ಸುಗಮ ಕನ್ನಡ ಕೂಟದ ವತಿಯಿಂದ ನೀಲಗಿರಿಗೆ (Blue Mountains) 4ನೇ ಏಪ್ರಿಲ್ 2009 ರಂದು ಚಾರಣ ಏರ್ಪಡಿಸಿದ್ದರು.ವೆಂಟ್ ವರ್ತ್ ಪಾಸ್ ನಿಂದ ಹೊರಟು ನ್ಯಾಷನಲ್ ಪಾಸ್ ಮೂಲಕ ಹಾದುಹೋಗಿ conservation hut ತಲುಪುವುದು ನಮ್ಮ ಮಾರ್ಗದರ್ಶಕರಾದ ಶ್ರೀ ರಾಜುರವರ ಯೋಜನೆಯಾಗಿತ್ತು.
ಸುಮಾರು 8 ಘಂಟೆ ಬೆಳಗಿನ ಚುಮುಚುಮು ಚಳಿಯಲ್ಲಿ ಬಿಸಿ ಇಡ್ಲಿ ಚಟ್ನಿ,ಕಾಫಿ ಸೇವಿಸಿ ಒಬ್ಬರನ್ನೊಬ್ಬರು ಪರಿಚಮ ಮಾಡಿಕೊಂಡೆವು.ಶ್ರೀ ರಾಜು ರವರಿಂದ ತಂಡದವರು ಪಾಲಿಸಬೇಕಾದ ನಿಯಮಗಳನ್ನು ತಿಳಿಸಿಕೊಡಲಾಯಿತು.ಎಲ್ಲರೂ ತಮ್ಮ ತಮ್ಮ ಬ್ಯಾಗುಗಳಲ್ಲಿ ಮಧ್ಯಾನ್ಹದ ಊಟದ ಬುತ್ತಿಯನ್ನು ಸೇರಿಸಿಕೊಂಡು ಬೆನ್ನಿಗೇರಿಸಿ ಸಿಪಾಯಿಗಳಂತೆ ಮಾರ್ಗದರ್ಶಿಗಳನ್ನು ಹಿಂಬಾಲಿಸಿದೆವು.ಕೆಲವೇ ನಿಮಿಷಗಳು ನಡೆದ ನಂತರ ಒಂದು ಮನೋಹರವಾದ ಜಲಪಾತ ಕಾಣಿಸಿತು.ಭಾರತದ ಅದರಲ್ಲೂ ನಮ್ಮ ಕರ್ನಾಟಕದ ಮಲೆನಾಡಿನ್ನು ನೆನೆಪಿಗೆ ತರುವಂಥ ದೃಷ್ಯ ತಂಪಾಗಿದ್ದು ಆನಂದ ನೀಡಿತು.ಎಲ್ಲೆಲ್ಲೂ ವಿಧವಿಧ ಭಂಗಿಗಳಲ್ಲಿ ನಿಂತು ಫೋಟೋ ತೆಗೆದುಕೊಂಡೆವು.ಅಲ್ಲಲ್ಲಿ ಏಣಿಗಳು ಹಾಗೂ ಬಂಡೆಗಳನ್ನೇರಿ ಮುನ್ನಡೆದೆವು.ನಮ್ಮ ಗುಂಪಿನಲ್ಲಿ ಮಕ್ಕಳು,ತರುಣರು ಹಾಗೂ ವಯಸ್ಕರನ್ನೂ ಕೂಡಿದ್ದರೂ ಸಹ ಯಾವುದೇ ವ್ಯತ್ಯಾಸವಿರಲಿಲ್ಲ.ಎಲ್ಲರೂ ಒಂದೆ ವೇಗದಿಂದ,ಉತ್ಸಾಹದಿಂದ ಹಾಡುತ್ತಾ ಹರಟುತ್ತಾ ಒಬ್ಬರಿಗೊಬ್ಬರು ಸಹಕರಿಸುತ್ತಾ ನಡೆಯುತ್ತಿದ್ದರು.
ಸುತ್ತಲೂ ಬಂಡೆಗಳು,ಪ್ರಪಾತ,ಕಿರಿದಾದ ದಾರಿ,ಝರಿಗಳು,ಸಣ್ಣಪುಟ್ಟ ಜಲಪಾತಗಳು,ಎತ್ತರವಾದ ನೀಲಗಿರಿ ಮತ್ತು ವಿಭಿನ್ನ ಜಾತಿಯ ಮರಗಳು,ಕಲ್ಲುಹೂಗಳು,ಫರ್ನ್(Fern)ಹೀಗೇ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಮುನ್ನಡೆದೆವು.ನಮ್ಮ ವೇಗಕ್ಕೆ ಕತ್ತರಿ ಹಾಕಿದಂತೆ ಮತ್ತೊಂದು ಅದ್ಭುತವಾದ ಜಲಪಾತ ನೋಡಿದೆವು.ಎಲ್ಲರೂ ಮಕ್ಕಳಂತೆ ನೀರಿನಲ್ಲಿ ನಡೆದೆವು,ಓಡಿದೆವು,ಆಡಿದೆವು.ಆ ಜಲಪಾತದ ವಿಶೇಷವೆಂದರೆ ನಾವು ಬಂಡೆಗಳನ್ನೇರಿ ಧುಮುಕುವ ನೀರಿನ ಹಿಂಭಾಗದಿಂದ ನಡೆದು ಬರುವ ಅದ್ಭುತ ಅನುಭವ ಪಡೆದೆವು.ಸ್ವಲ್ಪ ಹೊತ್ತಿನ ಕಾಲ ಅಲ್ಲೇ ಕಳೆದು ಪ್ರಯಾಣ ಮುಂದುವರೆಸಿದೆವು.
ಜಯಂತ್ ರವರು ಹೇಳಿಕೊಟ್ಟ ನಡೆಮುಂದೆ ನಡೆಮುಂದೆ ನುಗ್ಗಿನಡೆಮುಂದೆ.....ಹಾಡುತ್ತಾ ಮುಂದೆ ಸಾಗಿದೆವು.ಸಮಯ ಸುಮಾರು ಮಧ್ಯಾನ್ಹ ಒಂದರ ವೇಳೆಗೆ ರಾಜಿನಾರಾಯಣ ಅವರು ಮಾಡಿ ತಂದಿದ್ದ ಪಲಾವ್ ಮತ್ತು ಮೊಸರನ್ನದ ಬುತ್ತಿ ಖಾಲಿ ಮಾಡಿದೆವು.ಅದೇ ಸಮಯದಲ್ಲಿ ವಿಶ್ರಾಮಕ್ಕೆ ನಿಂತಿದ್ದಾಗ ಜಿಗಣೆಗಳ ಪರಿಚಯವಾಯ್ತು.ಒಬ್ಬೊಬ್ಬರೂ ತಮ್ಮ ಶೂ ಬಿಚ್ಚಿ ನೋಡಿಕೊಳ್ಳತೊಡಗಿದರು.ಭಾವನ,ಭರತ್ ಅವರಿಗೆ ಜಿಗಣೆ ಆಗತಾನೆ ಹಿಡಿದಿದ್ದರಿಂದ ಅದನ್ನು ಕಿತ್ತಿಹಾಕುವುದು ಕಷ್ಟವಾಗಲಿಲ್ಲ.ಮೊದಲಿಗೆ ಮಕ್ಕಳು ಗಾಬರಿಗೊಂಡರೂ ನಮ್ಮ ನಾಯಕರು ಅವರನ್ನು ಸಮಾಧಾನ ಮಾಡಿ ಹುರಿದುಂಬಿಸುವಲ್ಲಿ ಯಸಸ್ವಿಯಾದರು.ನಮ್ಮ ಗುಂಪಿಗೆ ಮೊದಲ ಬಾರಿ ಬಂದಿದ್ದುತ್ಸಾಹಿ ಯುವಕ ಗಣೇಶ್ ಅವರು ನಮ್ಮ ಇಡೀ ಗುಂಪಿನ ಹಾಗೂ ಉತ್ತಮ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಲೇ ಸಾಗಿದ್ದರು.
ಹೀಗೇ ನಡೆಯುತ್ತಿರಲು ಒಂದು ದೊಡ್ಡ ಗುಡ್ಡ ಹತ್ತಬೇಕಾಯಿತು ಬೇರೆ ದಾರಿ ಕಾಣದಿದ್ದರಿಂದ ನಾವೆಲ್ಲಾ ಕೆಸರಿನ ಗದ್ದೆಯಲ್ಲಿ ಕಾಲಿರಿಸಿ ರೈತರಂತೆ, ಜಡಿ ಮಳೆಯನ್ನೂ ಲೆಕ್ಕಿಸದೆ ನಡೆಯುತ್ತಾ.ಇನ್ನೇನು ವಿಜಯ ಧ್ವಜ ಹಾರಿಸಬೇಕು ಎನ್ನುವಷ್ಟರಲ್ಲಿ ನಮ್ಮ ನಾಯಕರಿಗೆ ನಾವು ದಾರಿತಪ್ಪಿದ ಅರಿವಾಯಿತು, ನಮ್ಮ ಉತ್ಸಾಹ ಕೆಲವೇ ಕ್ಷಣಕಾಲ ಟುಸ್ಸೆಂದಿತು.ಕೆಲವರ ಮುಖದಲ್ಲಿ ಆತಂಕ ಕಂಡಿತು.ಆದರೆ ನಮ್ಮ ನಾಯಕರು ನಮ್ಮನ್ನು ಅಲ್ಲೇ ನಿಲ್ಲಿಸಿ ಕೆಲವೇ ನಿಮಿಷಗಳಲ್ಲಿ ಸರಿಯಾದ ಮಾರ್ಗ ಕಂಡುಹಿಡಿದು ಗುಂಪಿಗೆ ಪುನಃ ಉತ್ಸಾಹ ತುಂಬಿದರು.
ಮತ್ತೆ ಅದೇ ಹುರುಪಿನಿಂದ ಹೊರಟ ನಮಗೆ ಇನ್ನೊಂದು ಆಶ್ಚರ್ಯದ ದೃಶ್ಯ ಕಾದಿತ್ತು.ಕೆಲವು ಹುಡುಗಿಯರು ಬೃಹತ್ ಜಲಪಾತದಿಂದ ಹಗ್ಗ ಕಟ್ಟಿಕೊಂಡು ಮೇಲಿನಿಂದ ನೀರಿನ ಜೊತೆಜೊತೆಗೇ ಜಾರಿ ಜಲಪಾತದ ಅಂತ್ಯದಲ್ಲಿದ್ದ ಹೊಂಡಕ್ಕೆ ಧುಮುಕುತ್ತಿದ್ದರು.ಅದೊಂದು ಸಾಹಸಮಯ ಕ್ರೀಡೆಯಾದ Abseiling.ಮುಂದೆ ಹೀಗೇ ಸುತ್ತಮುತ್ತಲಿನ ಸುಂದರ ನೋಟಗಳನ್ನು ಸವೆಯುತ್ತಾ ಸುಮಾರು ಮೆಟ್ಟಿಲುಗಳನ್ನೇರಿದ ಮೇಲೆ ವಿಕ್ಟೋರಿಯಾ ಲುಕ್ ಔಟ್ ತಲುಪಿದೆವು.ಅಲ್ಲಿಂದ ನೋಡಿದರೆ ನಾವು ದಿನವಿಡಿ ನಡೆದುಬಂದ ದಾರಿ, ಪ್ರಪಾತ ಎಲ್ಲಾ ಹಿಮದಿಂದ ಕವಿದಂತೆ ಕಂಡಿತು.ಅಲ್ಲಿಂದ ನೋಡಿದರೆ ರೋಮಾಂಚನಕಾರಿ ಅನುಭವ.ಏನನ್ನೋ ಸಾಧಿಸಿದ ಅನುಭವ ಹಾಗೂ ನಮ್ಮ ಬಗ್ಗೆ ನಮಗೇ ಹೆಮ್ಮೆ ಮೂಡಿತ್ತು.ಇದಾದ ನಂತರ ಎರಡು ಮೂರು ನಿಮಿಷಗಳ ಕಾಲ ನಡೆದು Coservation hut ತಲುಪಿದೆವು.ತುಂತುರು ಮಳೆ ಚುಮುಚುಮು ಚಳಿಗೆ ಬಿಸಿಬಿಸಿ ಕಾಫಿ ಸವಿದದ್ದು ಹೇಳಿ ಮಾಡಿಸಿದಹಾಗೆ ಇತ್ತು.ಕಾಫಿಗೆ ಕುಳಿತಾಗ ಒಬ್ಬರನ್ನೊಬ್ಬರು ಅಭಿನಂದಿಸಿದರು.ಬೆಳಿಗ್ಗೆ ಮುಖಪರಿಚಯವೇ ಇಲ್ಲದವರು ಸಂಜೆಯ ವೇಳೆಗೆ ಒಂದೇ ಕುಟುಂಬದವರಂತಾಗಿದ್ದೆವು.
ಇದಾದ ನಂತರ ಎಲ್ಲರೂ ತಮ್ಮ ತಮ್ಮ ಕಾರುಗಳಲ್ಲಿ ಮನೆಸೇರಿದೆವು.ಕೆಲವರು ಮನೆ ಸೇರಿದಮೇಲೆ ಜಿಗಣೆ ಕಚ್ಚಿದ್ದು ಅರಿವಾಯಿತು.
ಇಂತಹ ಅಪರೂಪದ ಅನುಭವದ ಚಾರಣವನ್ನು ಯೋಜಿಸಿದ ಸುಗಮಕನ್ನಡ ಕೂಟಕ್ಕೆ ಎಲ್ಲರ ಪರವಾಗಿ ಈ ಮೂಲಕ ನನ್ನ ಧನ್ಯವಾದಗಳು.