![]() | ಕನ್ನಡ ಪಾಠಶಾಲೆಯ 2008 ರ ವಾರ್ಷಿಕ ಸಮಾರಂಭಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಆಸ್ಟ್ರೇಲಿಯಾ ದೇಶದಲ್ಲೂ ಕನ್ನಡ ಕಲಿಯುವ ಆಸಕ್ತಿ ಹೊತ್ತ ಮಕ್ಕಳು ಹಾಗೂ ಅಭಿಮಾನಿ ಪೋಷಕರ
ಪ್ರೋತ್ಸಾಹದಿಂದ ನಡೆಯುತ್ತಿರುವ ಕನ್ನಡ ಪಾಠಶಾಲೆಯ ವರ್ಷ 2008 ರ ಕಡೇ ದಿನದ ಆಚರಣೆ ಸಮಾರಂಭ
ಶನಿವಾರ ಡಿಸೆಂಬರ್ 20 ರಂದು ಲಿವರ್ಪೂಲ್ ಮೈಗ್ರೆಂಟ್ ರಿಸೋರ್ಸ್ ಸೆಂಟರ್ ನಲ್ಲಿ
ನಡೆಯಿತು.ಮಧ್ಯಾಹ್ನ 1ಘಂಟೆಗೆ ಸ್ವಾಗತ ಮತ್ತು ಶಾಲೆಯ ಮಕ್ಕಳಿಂದ ಶಿಶುಗೀತೆಗಳೊಂದಿಗೆ ಶುರುವಾದ
ಕಾರ್ಯಕ್ರಮ ಮಕ್ಕಳ ಪೋಷಕರನ್ನು ಉದ್ದೇಶಿಸಿ ಶ್ರೀಮತಿ.ವೀಣಾ ಸುದರ್ಶನ್ ಅವರು ನೀಡಿದ ಕೆಲವು
ಸಲಹೆ,ಶಾಲೆ ನಡೆದುಬಂದ ರೀತಿಯ ಸಾರಾಂಶ ನೆರೆದಿದ್ದ ಸಭಿಕರಿಗೆ ಸಾಕಷ್ಟು ಮಾಹಿತಿ
ದೊರಕುವಂತಾಯಿತು.ಅದಾದನಂತರ ಚಿಕ್ಕಮಕ್ಕಳು ತಮ್ಮ ಪುಟ್ಟಬಾಯಲ್ಲಿ ಕನ್ನಡದಲ್ಲೇ ಶಾಲೆಯ ಬಗ್ಗೆ
ಕೊಟ್ಟ ಪುಟ್ಟ ಅಭಿಪ್ರಾಯದ ವರದಿಗಳು ಕೇಳಲು ಸೊಗಸಾಗಿತ್ತು.ಅವರಿಗೆ ಇಷ್ಟವಾದ
ಆಟ-ಪಾಠ,ಚಟುವಟಿಕೆಗಳನ್ನು ಹೆಸರಿಸುತ್ತಿರಲು ಶಿಕ್ಷಕರಿಗೆ ಸಂತೋಷ ತರುತ್ತಿತ್ತು.
ಮಕ್ಕಳು ತಮ್ಮ ಅನಿಸಿಕೆಗಳನ್ನು ಒಪ್ಪಿಸಿದ ನಂತರ ಶಾಲೆಯ ಸಂಪೂರ್ಣ ವರದಿಯನ್ನು ಶ್ರೀ.ಕನಕಾಪುರ
ನಾರಾಯಣ ಅವರು ಎಲ್ಲರ ಮುಂದಿಟ್ಟರು,ಮಕ್ಕಳು ಕಲಿಯುತ್ತಿರುವ ರೀತಿ,ವೇಗ,ಪೋಷಕರ ಪಾತ್ರ,ನೀಡಬೇಕಾದ
ಆಸಕ್ತಿ, ಮುಂದಿನ ವರ್ಷಕ್ಕೆ ಹಮ್ಮಿಕೊಂಡಿರುವ ಕೆಲವು ಹೊಸ ಯೋಜನೆಗಳು ಹಾಗೂ ಕಳೆದ ವರ್ಷದ ಖರ್ಚು
ವೆಚ್ಚಗಳ ವಿವರ ಎಲ್ಲವನ್ನೂ ಸರಳವಾಗಿ ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ.ಡಾ.ಮಧುಸೂದನ ಮತ್ತು ಶ್ರೀ ಹರೀಶ ರವರು 2008
ನೆಯ ಸಾಲಿನಲ್ಲಿ ಚೆನ್ನಾಗಿ ಕನ್ನಡ ಕಲಿತ ಮಕ್ಕಳಿಗೆ ಪ್ರಶಂಸಾ ಪತ್ರಗಳನ್ನು ಕೊಟ್ಟು
ಅಭಿನಂದಿಸಿದರು.ಶ್ರೀ ಹರೀಶ ಅವರು ತಮ್ಮ ಭಾಷಣದಲ್ಲಿ ಮಾತನಾಡುವಾಗ ಪ್ರಸ್ತುತ ಕಾಲದಲ್ಲಿ ಕನ್ನಡ ಏಕೆ
ಕಲಿಯದೇಕು ಮತ್ತು ಹೇಗೆ ಕಲಿಸಬೇಕು ಎಂಬುದರ ಬಗ್ಗೆ ವಿವರಿಸಿದರು.ಅವರ ಭಾಷಣ ಎಂದಿನಂತೆ
ತೂಕಡಿಸುತ್ತಿರುವ ಕನ್ನಡಿಗರನ್ನು ಬಡಿದೆಬ್ಬಿಸಿದಂತಿತ್ತು.ನಾಡಿನ ದೇಶದ ಏಳಿಗೆಗೆ ಭಾಷೆಯ
ಅವಶ್ಯಕತೆಯನ್ನು ಮನದಟ್ಟು ಮಾಡಿಕೊಟ್ಟರು.
ವಿಧ್ಯಾರ್ಥಿ ಎನೆಸಿಕೊಂಡ ಕುಮಾರಿ.ನಿಕಿತಾಳಿಗೆ ಪ್ರಶಂಸಾ ಪತ್ರ ಹಾಗೂ ಒಂದು ವಿಶೇಷ ಉಡುಗೊರೆಯನ್ನು
ಕೊಟ್ಟು ಎರಡು ಮಾತುಗಳನ್ನು ಆಡಿದ ಡಾ.ಮಧುಸೂದನ ಅವರ ಸೊಗಸಾದ ಭಾಷಣ ಕೇಳುಗರಿಗೆ ಕೆಲವು
ಅಚ್ಚರಿಯನ್ನೇ ಉಂಟುಮಾಡಿತು.ರಾಮಾಯಣ,ಸುಭಾಷಿತಗಳ ಉದಾಹರಣೆಗಳ ವಿವರಣೆ ನೀಡುತ್ತಾ ಮೈಸೂರಿನಲ್ಲಿ
ತಾವು ಕಾಲೇಜಿನಲ್ಲಿ ಓದುತ್ತಿದ್ದಾಗ ಕುವೆಂಪು ಅವರೊಂದಿಗೆ ನಡೆದ ಕೆಲವು ಸಂವಾದಗಳನ್ನು
ಹಂಚಿಕೊಂಡರು.ನೋಡಲು ಸರಳವಾಗಿ ಕಾಣುವ ವ್ಯಕ್ತಿಯಾದರೂ ವಯೋವೃದ್ಧರಷ್ಟೇ ಅಲ್ಲದೆ ಜ್ಞಾನವೃದ್ಧರೂ
ಅನ್ನುವುದು ಅವರ ಉತ್ಕೃಷ್ಟ ಭಾಷಣದ ಗುಣಮಟ್ಟದಿಂದ ತಿಳಿಯುವಂತಾಯಿತು.ಅದಾದ ನಂತರ ನೆರೆದಿದ್ದ
ಮಕ್ಕಳ ಪೋಷಕರೆಲ್ಲರ ಜೊತೆ ಅತಿಥಿಗಳೂ ಕೂಡಿ ನಕ್ಕು ನಲಿಯುತ್ತಾ ಶತಾಯುಶ ಎಂಬ ಆಟವನ್ನು ಆಡಿದ್ದು
ಮರೆಯಲಾಗದ ಘಳಿಗೆಯಾಗಿದೆ.
ಶಾಲೆಯು ಮುಂದಿನ ವರ್ಷ 11ನೇ ಜನವರಿಯಂದು ಮತ್ತೆ ಶುರುವಾಗಲಿದ್ದು ಕನ್ನಡ ಕಲಿಯಲು ಆಸೆಯುಳ್ಳವರು ಕೂಡಲೇ
ಶಾಲೆಯ ಸಮಿತಿಯವರನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.