![]() | ಸಿಡ್ನಿ ದಸರಾ ಬೊಂಬೆ ಹಬ್ಬ 2008ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಸಿಡ್ನಿಯಲ್ಲಿ ಸಾವಿರಕ್ಕೂ ಹೆಚ್ಚು ದಸರಾ ಬೊಂಬೆಗಳು! ರಂಗೋಲಿ! ಕಂಸಾಳೆ, ಡೊಳ್ಳು ಕುಣಿತ, ನಂದಿಕೋಲು, ಪಟ್ಟದ ಕುಣಿತ, ಕೋಲಾಟ! ಇವೆಲ್ಲಾ ಒಂದೇ ಬಾರಿ ಅನುಭವಕ್ಕೆ ತಂದ ದಿನ ಸಿಡ್ನಿಯಲ್ಲಿ ನಡೆದ ದಸರಾ ಹಬ್ಬ ಮತ್ತು ಕ್ಯಾರಯೋಕೆ ಗಾಯನ ಸಂಜೆ ನಾಡು, ನುಡಿ, ಸಂಸ್ಕೃತಿಯ ತುಡಿತವು ನಮ್ಮ ನಾಡ ಭಾಂಧವರಿಗೆ ದೂರವಿದ್ದಷ್ಟೂ ಹೆಚ್ಚಾಗುತ್ತದೆ ಅದನ್ನು ನೆನಪಿಸಿಕೊಳ್ಳಲು, ಮುದಪಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾ ಹೃದಯಗಳನ್ನು ನಾಡ ಮಣ್ಣ ಸಂಸ್ಕೃತಿಗೆ ಬೆಸೆದುಕೊಂಡಿರುತ್ತಾರೆ ಎಂಬುದಕ್ಕೆ ಸಾಕ್ಷಿ, ಎರಡನೇ ವರ್ಷದಲ್ಲಿ ಆಸ್ಟ್ರೇಲಿಯಾ ದೇಶದ ಮಟ್ಟಿಗೆ ಅದ್ದೂರಿಯಾಗಿ ನಡೆದ ನಮ್ಮ ನಾಡಹಬ್ಬ ದಸರಾ ಸಾಮೂಹಿಕವಾಗಿ ಆಚರಿಸುವ ಈ ಹಬ್ಬದ ಆಚರಣೆಗೆ ಕಳೆದ ವರ್ಷ ‘ಸುಗಮ ಗಾನ ಸಮಾಜ’ ದ ವತಿಯಿಂದ ನಾಂದಿ ಹಾಡಲಾಗಿದ್ದು, ಅದರ ಜನಪ್ರಿಯತೆಯು ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ಆಚರಿಸಿಕೊಂಡು ಹೋಗುವ ಸಂಕಲ್ಪಕ್ಕೆ ಕಾರಣವಾಗಿ, ಎರಡನೇ ವರ್ಷದಲ್ಲಿ ಇಲ್ಲಿನ ಶಾಲೆಯೊಂದರ ಸಭಾಂಗಣದಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ವೈಭವದಿಂದ ಆಚರಿಸಿದ್ದು, ತುಂಬಿದ್ದ ಸಭಾಂಗಣದಲ್ಲಿದ್ದ ಎಲ್ಲಾ ಅಭಿಮಾನಿ ಭಾಂಧವರುಗಳ ಹೃದಯ ಸೂರೆಗೊಂಡಿತು. ಮಧ್ಯಾಹ್ನ 3 ಗಂಟೆಗೆ ಬಣ್ಣ ಬಣ್ಣದ ಆಕರ್ಷಕ, ಸ್ವಾಗತ ರಂಗೋಲಿ ಹಾಕುವ ಕಾರ್ಯಕ್ರಮದಿಂದ ಪ್ರಾರಂಭವಾದ ಕುಟುಂಬಗಳ ಸಡಗರವು, ಬೊಂಬೆಗಳನ್ನು ಜೋಡಿಸುವುದರಿಂದ ಮುಂದುವರೆದು, ಸುಂದರವಾದ ಜೋಡಣೆಯು ಎದ್ದು ತೋರುವಂತೆ ಮಾಡಿದ್ದು ಚಿತ್ತಾಕರ್ಷಕ ದೀಪಾಲಂಕಾರಗಳಿಂದ ಕೂಡಿದ ಸಭಾಂಗಣವು ‘ಮೈಸೂರು ದಸರಾ’ ವೈಭವವನ್ನು ಮರುಕಳಿಸುವಂತೆ ಮಾಡಿದ್ದುವು. ಜಂಬೂ ಸವಾರಿಯನ್ನು ಹೊತ್ತ ಆನೆ, ಸೈನಿಕರು ಎಲ್ಲವೂ ಆಕರ್ಷಕ ಬೊಂಬೆಗಳೇ ಆದರೂ ನಮ್ಮಗಳ ಸ್ಮೃತಿಪಟಲಗಳ ಮೇಲೊಮ್ಮೆ ಎಲ್ಲಕ್ಕೂ ಜೀವ ಬಂದಂತಾಗಿ ಮೈಸೂರ ಸಡಗರವೆಲ್ಲ ಮೈಮನಗಳನ್ನಾವರಿಸಿದವು. ಕೆಲವು ಕುಟುಂಬಗಳ ಪ್ರದರ್ಶನವಂತೂ, ಇಲ್ಲಿಗೆ ಬಂದು ದಶಕಗಳೇ ಕಳೆದರೂ ಇನ್ನೂ ಅವರು ಉಳಿಸಿಕೊಂಡು ಬಂದಿರುವ ಸೃಜನಾತ್ಮಕತೆ, ಮತ್ತು ಕಲಾವಂತಿಕೆಗಳನ್ನು ಎತ್ತಿ ತೋರುತ್ತಿದ್ದವು. ಇದನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೂ ಹಸ್ತಾಂತರಿಸುವಲ್ಲಿ ಸಫಲ ಹೆಜ್ಜೆಗಳನ್ನಿರಿಸುತ್ತಿದ್ದಾರೆಂಬುದಕ್ಕೆ ಸಾಕ್ಷಿ ಇದರಲ್ಲಿ ಭಾಗವಹಿಸಿದ ಪುಟಾಣಿಗಳ ಸಡಗರ.
ಮುಂದೆ ನವರಾತ್ರಿಯ ಸಂಪ್ರದಾಯದಂತೆ ಗಣಪತಿ ಮತ್ತು ದೇವಿ ಪೂಜೆಯಿಂದ ಪ್ರಾರಂಭವಾದ ಕಾರ್ಯಕ್ರಮವು ದೇವರ ಪ್ರಾರ್ಥನೆಯಿಂದ ಮೊದಲುಗೊಂಡು "ಹಚ್ಚೇವು ಕನ್ನಡದ ದೀಪ...." ಎನ್ನುವ ಸಾಮೂಹಿಕ ನಾಡಗೀತೆಯಿಂದ ಮುಂದೆ ಸಾಗಿ ಮಕ್ಕಳ ಕನ್ನಡ ಕ್ಯಾರಯೋಕೆ ಗಾಯನಗಳಿಂದ ಮುಂದುವರೆದು, ಚಿಣ್ಣರ ಆಕರ್ಷಕ ಕೋಲಾಟದಿಂದ ಮನತಣಿದು ಮುಂದೆ ಕರ್ನಾಟಕ ಜನಪದ ನೃತ್ಯ ಪ್ರಕಾರಗಳಾದ ಕಂಸಾಳೆ,ಡೊಳ್ಳು ಕುಣಿತ, ನಂದಿಕೋಲು,ಪಟ್ಟದ ಕುಣಿತ ಮುಂತಾದ ಎಲ್ಲಾ ನೃತ್ಯಗಳನ್ನೊಳಗೊಂಡ ಒಂದು ಜನಪ್ರಿಯ ಗೀತೆಯ ನಮ್ಮ ಸಮುದಾಯದವರ ನೃತ್ಯ ಪ್ರದರ್ಶನವಂತೂ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿ ಸಡಗರದ ಉತ್ತುಂಗದಲ್ಲಿರುವಾಗಲೇ ಊಟಕ್ಕಾಗಿ ವಿರಾಮವನ್ನು ಘೋಷಿಸಲಾಯಿತು. ಮೈಸೂರು ಪಾಕು ಸಿಹಿಯ, ಸ್ವಾದಿಷ್ಟ ಮೈಸೂರು ಭೋಜನದ ನಂತರ ಅನೇಕ ಗೀತೆಗಳು ಮತ್ತು ಯುಗಳ ಗಾನಗಳ ಗಾಯನಗಳ ಮಾಧುರ್ಯದಿಂದ ಎಲ್ಲ ಅನುಭವಗಳೂ ಮಧುರವಾಗಿರುವಾಗಲೇ ಒಂದು ದೊಡ್ಡ ಸಹಕುಟುಂಬದಲ್ಲಿ ಆಚರಿಸಿದ ವೈಭವದ ದಸರಾ ಹಬ್ಬವು ನೆನಪಾಗಿ ಉಳಿಯುವ ಕ್ಷಣಗಳು ಬಂದೇ ಬಿಟ್ಟಿತು. ಭಾರವಾದ ಹೃದಯಗಳಿಂದ ಎಲ್ಲರೂ ಅಗಲಿದ ಸಮಯ ರಾತ್ರಿ ೧೦.೩೦. ಸಂಕಲ್ಪಿಸಿದಂತೆ ಇದಕ್ಕಿಂತ ಅದ್ದೂರಿ ಕ್ಷಣಗಳ ಮಧುರತೆಯನ್ನನುಭವಿಸಲು ಇನ್ನೊಂದು ಭಾರತದ ಶರದ್ ಋತುವಿಗಾಗಿ, ನವರಾತ್ರಿಗಾಗಿ ಕಾಯಬೇಕಲ್ಲ ಎಂದುಕೊಳ್ಲುತ್ತಲೇ ಮಧುರ ಕ್ಷಣಗಳ ಮೆಲುಕಿನಲ್ಲಿ ಅಗಲಿ ಜೀವನದ ಯಾಂತ್ರಿಕತೆಗೆ ಅನಿವಾರ್ಯವಾಗಿ ಮೈಯೊಡ್ಡಿಕೊಂಡೆವು.
ಮಕ್ಕಳಿಗೆ ಕನ್ನಡ ಶಾಲೆ, ವನಿತೆಯರಿಗೆ ಅಡುಗೆ ಶಾಲೆ,ಇಡೀ ಕುಟುಂಬಕ್ಕೆ ಕನ್ನಡದ ವೈದ್ಯರಿಂದ ಉಚಿತ ಆರೋಗ್ಯಕರ ಸಲಹೆ,ಮನರಂಜನೆಗೆಂದೇ ಈ ತರಹದ ಗಾಯನ/ನೃತ್ಯ/ಹಾಸ್ಯ /ಕನ್ನಡ ಚರ್ಚಾಕೂಟದಂತಹ ಜನೋಪಕಾರಿ ಸಂಜೆಗಳನ್ನು ಕಳೆದ 3-4 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯುವಕಲಾವಿದರ ತಂಡ ಬಲು ಉತ್ಸಾಹದಿಂದ ಕನ್ನಡ ನಾಡು ನುಡಿಗಳನ್ನು ಮರೆಯದ ಹಾಗೆ ಮೆರೆಸುವ ಹಾಗೆ ಹೆಜ್ಜೆ ಹಾಕುತ್ತಿದೆ.ಈ ಸಂಸ್ಥೆಯ ಕೆಲಸದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿ, ಸಲಹುತ್ತಿರುವ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು.
ಕನ್ನಡದವರು ಹತ್ತಾರು ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸಿಡ್ನಿಯಲ್ಲಿ ನೆಲೆಸಿದ್ದರೂ ಈ ರೀತಿಯ ಕರುನಾಡ ನಿಜವಾದ ಮಣ್ಣಿನ ವಾಸನೆ ಬೀಸಿ ಬರುತ್ತಿರುವುದು ಇತ್ತೀಚಿಗಷ್ಟೆ,ಅದಕ್ಕೆ ಕಾರಣ ಈ ಯುವಕನ್ನಡಿಗರ ಉತ್ಸಾಹ. ‘ಏನೇ ಮಾಡಲಿ ಕನ್ನಡ ತನವೋಂದಿರಲಿ’ ಎನ್ನುವುದೇ ಈ ಬಳಗದವರ ಸದುದ್ದೇಶ. ಮುಂದೆ ಸಿಡ್ನಿಯ ಎಲ್ಲ ಕನ್ನಡಿಗರೂ ಇಂತಹ ಕಾರ್ಯಕ್ರಮಗಳಿಗೆ ಹಾಜರಾಗಿರೆಂದು ಈ ಲೇಖನದ ಮೂಲಕ ಕೇಳಿಕೊಳ್ಳುತ್ತೇನೆ.
- ಅಶೋಕ್ ಕುಮಾರ್ ಸಿಡ್ನಿ,