![]() | ಕಾಂಗರೂ ನಾಡಿನಲ್ಲಿಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ |
ಕಾರ್ಯಕ್ರಮದ ಭಾವಚಿತ್ರಗಳು PHOTOS - http://picasaweb.google.com/PushpaDakshin/DasaraKaraokePhotos#
ಸಿಡ್ನಿಯಲ್ಲಿ ಹಂಪೆಯ ಕಲ್ಲಿನ ರಥ ! 2007 ಅಕ್ಟೋಬರ್ ನಲ್ಲಿ ಸಿಡ್ನಿಯಲ್ಲಿ ನಡೆದ ಕನ್ನಡ ಕ್ಯಾರೆಯೋಕೆ /ಮೈಸೂರು ದಸರಾ ಬೊಂಬೇ ಪ್ರದರ್ಶನದಲ್ಲಿ ಶ್ರೀ ಗೋಪಿನಾಥ ಮಾಲೂರು ಅವರ ಕಲಾತ್ಮಕ ಕುಸುರಿ ಕೆಲಸದಿಂದ ಕೂಡಿದ್ದ ಹಂಪಿಯ ಅವಶೇಷಗಳಾದ ಕಲ್ಲಿನ ರಥ , ಸುಂದರ ದೇಗುಲ ಮುಂತಾದುವುಗಳು ಎಲ್ಲರ ಕಣ್ಮನಗಳನ್ನು ಸೆಳೆದಿದ್ದು ಮಾತ್ರವಲ್ಲದೇ, ಪ್ರದರ್ಶನದಲ್ಲಿ ಅತೀ ಉತ್ತಮವಾದುದ್ದೆಂದು ಬಹುಮಾನವನ್ನೂ ಗಿಟ್ಟಿಸಿಕೊಂಡಿತು. ಅದನ್ನು ಕಂಡ ನಮ್ಮಗಳ ಹೃದಯದಲ್ಲಿ ಪ್ರತಿಧ್ವನಿಸುತ್ತಿದ್ದುದು "ಹಾಳಾಗಿಹ ಹಂಪೆಗೆ ಕೊರಗುವ ಮನ ಎಲ್ಲಿದ್ದರೇಮ್,ಎಂತಿದ್ದರೇಮ್, ಕನ್ನಡವೇ ಸತ್ಯ ಕನ್ನಡವೇ ನಿತ್ಯ...ಎಂದು.
ಕಾಲದ ತೆರೆಯ ಮೇಲಿನ ತರಗೆಲೆಗಳಾಗಿ, ಬಂಗಾರ ನೀರ ಕಡಲಾಚೆಗೆ ತೇಲಿ ಬಂದು, ಇಲ್ಲೊಂದು ತೀರದಲ್ಲಿ ಸೇರಿರುವ ನಮ್ಮಲ್ಲಿ ಅನೇಕರಿಗೆ ಅಂದುಕೊಂಡು ಬಂದ ಆಸೆ ಫಲಿಸಿದ್ದರೆ, ಕಳೆದದ್ದೇನೆಂದು ಬಂದ ದಾರಿಯನ್ನೊಮ್ಮೆ ಹಿಂತಿರುಗಿ ನೋಡಿದಾಗ, ನಮಗಿಂತ ಮಿಗಿಲಾಗಿ ನಮ್ಮ ಪುಟ್ಟ ಕಣ್ಮಣಿಗಳಿಗೆ ನಮ್ಮ ನಾಡು, ನುಡಿ, ಸಂಸ್ಕೃತಿಯ ಕೊಂಡಿಯೇ ಕಳಚಿ ಹೋಗುತ್ತಿದೆಯೇನೋ ಎನಿಸಿದಾಗ ನಮ್ಮ ಕನಸಿನ ಭವ್ಯ ಸೌಧದ ನೆಲೆಗಟ್ಟೇ ಕುಸಿಯುತ್ತಿರುವ ಅನುಭವವಾಗಿ ಎದೆ ಝಲ್ಲೆನ್ನುತ್ತದೆ. ಅದೇ ಕಾರಣಕ್ಕಾಗಿ ನಮ್ಮ ಸಂಸ್ಕೃತಿಯನ್ನು ನೆನಪಿಗೆ ತರುವ ಅನೇಕ ಹಬ್ಬ ಹರಿದಿನಗಳನ್ನು ನೆನೆಯುತ್ತಾ ಎದೆಗವುಚಿಕೊಂಡು ಆಚರಿಸುವ ಪ್ರಯತ್ನ ನಮ್ಮದು. ಸರಿಸುಮಾರು ಎಲ್ಲ ಭಾರತೀಯ ಹಬ್ಬಗಳನ್ನು ಆಚರಿಸುವ ನಮಗೆ, ವಿಶೇಷವಾಗಿ ಮಣ್ಣಿನ ಸೊಗಡನ್ನು ನೆನಪಿಸುವ ಯುಗಾದಿ ಮತ್ಥು ದಸರಾಗಳೆಂದರೆ ಎಲ್ಲಿಲ್ಲದ ಪ್ರೀತಿ. ಯುಗಾದಿಯನ್ನು ಮನೆಮನೆಗಳಲ್ಲಿ ಆಚರಿಸುವುದು ಮಾತ್ತ್ರ್ರವಲ್ಲದೇ ಸಾಮೂಹಿಕವಾಗಿ ಆಚರಿಸುವ ಪರಿಪಾಠವಿದೆ.
ಅದೇ ರೀತಿ ನವರಾತ್ರಿ ಬಂದಾಗ ಹಲವಾರು ಮನೆಗಳಲ್ಲಿ ಬೊಂಬೆಯನ್ನು ಕೂರಿಸಿ, ರಾಜ ರಾಣಿಯರು ಸೇರಿದಂತೆ ಜಗತ್ತಿನ ಎಲ್ಲ ಜನ, ಪ್ರಾಣಿ, ಪಕ್ಶಿ, ಗಿಡ ಮರಗಳೆಲ್ಲ ಆ ದೇವನಾಡಿಸುವ ನಿರ್ಜೀವ ಬೊಂಬೆಗಳೇ ಎಂದು ಪ್ರತಿವರ್ಷವೂ ನೆನಪಿಸಿಕೊಳ್ಳುವ ಕನ್ನಡಿಗರ ಉನ್ನತ ಮನೋಭಾವವನ್ನು ಮೆರೆಯುತ್ತಿದ್ದಾರೆ. ಈ ಬಾರಿಯ ದಸರಾದಂದು ಇನ್ನೊಂದು ಸಾಂಸ್ಕೃತಿಕ ಜ್ಯೋತಿಯನ್ನು ಬೆಳಗಿದ್ದಾರೆ, ಅದೆಂದರೆ ಸಮೂಹಿಕವಾಗಿ ಆಚರಿಸಿದ ದಸರಾ ಬೊಂಬೆ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು. ಆಸಕ್ತ ಅಭಿಮಾನಿಗಳು ಸೇರಿ ಶ್ರೀ ನಾರಾಯಣ ಕನಕಾಪುರ ರವರ ನೇತೃತ್ವದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದ ಭಾಗವಾದ ಬೊಂಬೇ ಪ್ರದರ್ಶನ ಬಹುಶಃ ಅನಿವಾಸಿ ಕನ್ನಡಿಗರಾಚರಿಸುತ್ತಿರುವ ದಸರಾ ಆಚರಣೆಯಲ್ಲಿ ವಿಶ್ವದಲ್ಲಿಯೇ ಮೊಟ್ಟ ಮೊದಲನೇಯದೆನ್ನಬಹುದೇನೊ. ಸುಮಾರು ಹತ್ತಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿ ಮಾಡಿದ ಬೊಂಬೇ ಪ್ರದರ್ಶನದಲ್ಲಿ ಎಲ್ಲವೂ ವೈಶಿಷ್ತ್ಯದಿಂದ ಕೂಡಿದ್ದವು. ಅದರಲ್ಲಿ ಪ್ರಮುಖವಾದದ್ದು ದೊಡ್ಡ ಆನೆಯ ಮೇಲಿನ ಅಂಬಾರಿಯಲ್ಲಿ ಚಾಮುಂಡೆಶ್ವರಿಯ ಮೆರವಣಿಗೆ, ಮರದ ಪಟ್ಟದ ಬೊಂಬೆಗಳು ಶ್ರೀ ಗೋಪಿನಾಥ ಮಾಲೂರು ಅವರ ಕಲಾತ್ಮಕ ಕುಸುರಿ ಕೆಲಸದಿಂದ ಕೂಡಿದ್ದ ಹಂಪಿಯ ಅವಶೇಷಗಳಾದ ಕಲ್ಲಿನ ರಥ , ಸುಂದರ ದೇಗುಲ ಮುಂತಾದುವುಗಳು ಎಲ್ಲರ ಕಣ್ಮನಗಳನ್ನು ಸೆಳೆದಿದ್ದು ಮಾತ್ರವಲ್ಲದೇ, ಪ್ರದರ್ಶನದಲ್ಲಿ ಅತೀ ಉತ್ತಮವಾದುದ್ದೆಂದು ಬಹುಮಾನವನ್ನೂ ಗಿಟ್ಟಿಸಿಕೊಂಡಿತು. ಅದನ್ನು ಕಂಡ ನಮ್ಮಗಳ ಹೃದಯದಲ್ಲಿ ಪ್ರತಿಧ್ವನಿಸುತ್ತಿದ್ದುದು "ಹಾಳಾಗಿಹ ಹಂಪೆಗೆ ಕೊರಗುವ ಮನ ಎಲ್ಲಿದ್ದರೇಮ್,ಎಂತಿದ್ದರೇಮ್, ಕನ್ನಡವೇ ಸತ್ಯ ಕನ್ನಡವೇ ನಿತ್ಯ"...ಎಂದು. ಪ್ರದರ್ಶನದ ಎಲ್ಲಾ ಬೊಂಬೆಗಳ ಕಲಾತ್ಮಕತೆಯನ್ನು ನೋಡಿ ಕಣ್ಮನ ತುಂಬಿಬಂದು ಹೆಮ್ಮೆಯಿಂದ ಎದೆಯುಬ್ಬಿ ಮುಂದಿನ ಕಾರ್ಯಕ್ರಮವಾದ ಸಂಗೀತ ರಸಸಂಜೆಯಲ್ಲಿ ಮಿಂದು ಪುನೀತರಾಗಲು ಅಣಿಯಾದೆವು. ನಲಿವ ಹೃದಯಗಳ ನೈಸರ್ಗಿಕ ಅಭಿವ್ಯಕ್ತಿಯೇ ಸಂಗೀತ. ಸಂಗೀತವು ನಮ್ಮ ತಾಯ್ನುಡಿಯೊಂದಿಗೆ ಬೆರೆತರಂತೂ ನಮ್ಮ ಮನಗಳು ಸಹ್ಯಾದ್ರಿಯ ನವಿಲಾಗಿ ನರ್ತಿಸುವುದು. ಅಂತಹ ಸಂಗೀತದ ರಸಸಂಜೆಯನ್ನಾಚರಿಸುವುದರಿಂದ ನಿಜವಾಗಿ ದಸರಾ ಆಚರಣೆಗೆ ವೈಭವದ ಇನ್ನೊಂದು ಆಯಾಮವನ್ನೇ ಕಲ್ಪಿಸಲಾಗಿದ್ದು ಹೊಸ ಮೆರುಗನ್ನೇ ನೀಡಿತು. ಸಂಗೀತ ಸುಧೆಯು, ಅರ್ಥಪೂರ್ಣವಾದ "ಹಚ್ಚೇವು ಕನ್ನಡದ ದೀಪ" ಎಂಬ ಸಮೂಹ ಗೀತೆಯಿಂದ ಶುಭಾರಂಭವಾದದ್ದು, ಕೇವಲ ಕಾಕತಾಳೀಯವಾಗಿರದೇ ನಿಜವಾದ ಅರ್ಥದಲ್ಲಿ ಕರುನಾಡ ಸಿರಿನುಡಿಯ ದೀಪವೊಂದನ್ನು ಸಿಡ್ನಿ ನಗರದಲ್ಲಿ ಬೆಳಗಿದ ಶುಭ ಸಂದರ್ಭವಾಗಿತ್ತು.
ಶ್ರೀಮತಿ.ಶುಭಶ್ರೀ ಮತ್ತು ತಂಡದವರಿಂದ ಈ ಗೀತೆಯು ಹಾಡಲ್ಪಟ್ಟಿದ್ದು ಇನ್ನೂ ವಿಶೇಷ. ಕ್ಯಾರೆಯೋಕೆ ಸಂಗೀತದ ಜೊತೆ ಭಕ್ತಿ, ಭಾವ, ಜನಪದ ಹಾಗೂ ಚಿತ್ರಗೀತೆಗಳನ್ನು ಹಾಡಿದವರು ಸುಮಾರು ಐವತ್ತು ಮಂದಿ ಸ್ಥಳೀಯ ಗಾಯಕ ಗಾಯಕೀಯರು ಮಾತ್ರವಲ್ಲದೆ ಮುಖ್ಯವಾಗಿ ಮಕ್ಕಳು. ನಮ್ಮ ಜೊತೆಗಾರರಲ್ಲಿ ಇಷ್ಟೊಂದು ಮಂದಿಗೆ ಇಂತಹ ಪ್ರತಿಭೆಗಳಿರುವುದನ್ನು ಕಂಡಾಗಲಂತೂ "ಎಲ್ಲಿದ್ದವು ಈ ಪ್ರತಿಭೆಗಳು? ನಮ್ಮ ಜೊತೆಯಲ್ಲಿದ್ದರೂ ಬೂದಿಮುಚ್ಚಿದ ಕೆಂಡದಂತೆ, ವರುಷಗಳ ಒಡನಾಟದಿಂದಲೂ ಇವರಲ್ಲಿ ಹುದುಗಿದ್ದ ಕಲೆಯ ಸುಳಿಯೂ ತಿಳಿಯಲಿಲ್ಲವಲ್ಲಾ" ಎಂದೆನಿಸಿತು. ಬೇರೆಯದೇ ಪರಿಸರದಲ್ಲಿ ತಾಯ್ನಾಡಿನಿಂದ ಸಾವಿರಾರು ಮೈಲುಗಳಾಚೆಗಿರುವಾಗಲೂ ನಮ್ಮತನವನ್ನು ಉಳಿಸಿ, ಬೆಳೆಸಿಕೊಂಡು ಹೃದಯಗಳಲ್ಲಿ ಹಸಿರಾಗಿರಿಸಿಕೊಂಡಿರುವುದನ್ನು ಕಂಡಾಗ ಇಂತಹವರ ಜೊತೆಯಿರುವ ನಾವುಗಳೆ ಅದೃಷ್ಟಶಾಲಿಗಳೆನಿಸಿತು. ಅದರಲ್ಲೂ ಇಲ್ಲಿ ಹುಟ್ಟಿದ ಮಕ್ಕಳು, ಇಲ್ಲಿ ಬೆಳೆಯುತ್ತಿರುವ ಮಕ್ಕಳು, ಹಾಡಿ ನಲಿದ ಪರಿಯಂತೂ ಅಪ್ಯಾಯಮಾನವಾಗಿತ್ತು. ನೋಡಿ ನಲಿದ ಪ್ರೇಕ್ಷಕರ ಮನದಾಳದಂತೆ, ಸಂಚಾಲಕರೂ ಮಂತ್ರಮುಗ್ಧರಾಗಿ, ಬರುವ ವರ್ಷ ಬರಿಯ ಮಕ್ಕಳ ಸಂಗೀತ ಸಂಜೆಯನ್ನೇ ಏರ್ಪಡಿಸುವ ಆಲೋಚನೆಯನ್ನು ಮುಂದಿಟ್ಟರು.
ಸಂಗೀತ ಸಂಜೆಯನ್ನು,"ಭಾವಗೀತೆ, ಭಕ್ತಿಗೀತೆ, ಜನಪದ, ಮಕ್ಕಳ, ಯುಗಳ,ಹಳೇಯ ಮಾಧುರ್ಯ ಪ್ರಧಾನ, ಡಾ|| ರಾಜ್ ನೆನಪಿನ ಗೀತೆಗಳು" ಹೀಗೆ ಹಲವಾರು ಭಾಗವನ್ನಗಿಸಿ ಹಾಡಿದ್ದನ್ನು ಕೇಳಿ ನಲಿದೆವು.ಒಂದೊಂದು ಗೀತೆಯೂ ನೆನಪಿನಂಗಳದಲ್ಲಿ ಅಳಿಸಲಾರದ ಅನುಭವ ಮೂಡಿಸಿತು. ಪ್ರತಿಯೊಂದರ ನಿರೂಪಣೆಯೂ ಆಕರ್ಷಕ, ಕಾರ್ಯಕ್ರಮದ ಮಧ್ಯದಲ್ಲಿ ಉಪಹಾರ ಮತ್ತು ಭೋಜನ ವ್ಯವಸ್ಥೆಯೂ ಶುಚಿರುಚಿಯಿಂದ ಕೂಡಿದ್ದು ದಸರೆಯ ಮೈಸೂರನ್ನು ನೆನಪಿಸುವ ಸ್ವಾದಿಷ್ಟ ಮೈಸೂರ್ ಪಾಕಿನಿಂದ ಸಮರ್ಪಕತೆಯನ್ನು ಪಡೆದುಕೊಂಡಿತು. ಕಾರ್ಯಕ್ರಮವನ್ನು ನೋಡುತ್ತಿದ್ದಂತೆಯೇ ದೊಡ್ಡ ಪರದೆಯ ಅದನ್ನು ವೀಡಿಯೋ ಮೂಲಕ ತೋರಿಸುತ್ತಿದ್ದುದಂತೂ ಅತ್ಯಾಕರ್ಷಕವಾಗಿತ್ತು, ಕಲಾವಿದರ ಮುಖಭಾವವನ್ನು ಸಭಾಂಗಣದಲ್ಲಿ ಕುಳಿತವರೆಲ್ಲರೂ ವೀಕ್ಷಿಸುವ ಅವಕಾಶವನ್ನು ಕಲ್ಪಿಸಿದ್ದು, ಇಲ್ಲಿಯ ಕನ್ನಡ ಕಾರ್ಯಕ್ರಮಗಳಲ್ಲಿ ಮೊಟ್ಟಮೊದಲ ಬಾರಿ. ಕೆಲವೊಮ್ಮೆ ಸಿನಿಮಾ ಹಾಡುಗಳನ್ನು ಹಾಡುತ್ತಿದ್ದಂತೆಯೇ ಅದರ ಮೂಲ ಹಿರಿತೆರೆಯಲ್ಲಿ ಬರುತ್ತಿದ್ದುದೊಂದು ವಿಶೇಷವೆನಿಸಿ ಎಡೀಯ ಕಾರ್ಯಕ್ರಮಕ್ಕೆ ಭವ್ಯತೆಯ, ಅದ್ಧೂರಿತನದ ಸಿಂಚನ ಮಾಡಿತ್ತು. ಈ ಎಲ್ಲಾ ಕಾರ್ಯಕ್ರಮಗಳಿಂದ, ಆಸ್ಟ್ರೇಲಿಯಾ ದೇಶದ ಸಿಡ್ನಿ ನಗರದಲ್ಲಿ ನಡೆದ, ದಸರೆಯ ಭವ್ಯವಾದ ಒಂದು ಅಧ್ಯಾಯ ಮುಗಿಯಲಿಲ್ಲ, ಬದಲಿಗೆ ಪ್ರತಿವರ್ಷವೂ ಇನ್ನೂ ವಿಭಿನ್ನವಾಗಿ ವೈಭವಯುತವಾಗಿ ನಡೆಯಲೆಂಬ ಆಶಾಮನೋಭಾವನೆಯೊಂದಿಗೆ, ನಡೆಸಲು ಬೇಕಾದ ಶಕ್ತಿ, ಸ್ಪೂರ್ತಿ ಮತ್ತು ಸಾಧನೆಗಳನ್ನೆಲ್ಲ ಸಂಚಾಲಕರಿಗೆ ಒದಗಿ ಬರಲೆಂಬ ಆಶಯದ, ಮುಂದಿನ ದಸರೆಯ ನಿರೀಕ್ಷೆಯ ಹೊಸ ಅಧ್ಯಾಯದ ಪ್ರಾರಂಭವಾಗಿತ್ತು