ಭಾವಗೀತೆ (ಏ)
ಏನ ಕೊಡ ಏನ ಕೊಡವ
ಏನ ಕೊಡ ಏನ ಕೊಡವ
ಹುಬ್ಬಳ್ಳಿ ಮಾಟ ಏನ ಚಂದದ ಕೊಡವಾ ||
ತಿಕ್ಕಿಲ್ಲ ಬೆಳಗಿಲ್ಲ ತಳ ತಳ ಹೊಳಿತದ
ಕಂಚಲ್ಲ ತಾಮ್ರವಲ್ಲ ಮಿರಿ ಮಿರಿ ಮಿಂಚುತದ ||
ಆರು ಮಂದಿ ಅಕ್ಕತಂಗಿ ಮೀರಿ ಮಿಂಚಿದ ಕೊಡ
ಮೂವರು ಮುತ್ತೈದೆಯರು ಲೋಲಾಡಿದ ಕೊಡ ||
ಶಿವರಾತ್ರಿ ಜಾತ್ರಿಗೆ ಹೋಗಿ ಸಿದ್ಧರಾಮನ ದರ್ಶನವಾಗಿ
ಮಳ್ಳವ್ವ ಬಾಜಾರದಲ್ಲಿ ಬಾಳಿ ಹೋತವ್ವ ಕೊಡ ||
ಆರು ಮಂದಿ ಅಕ್ಕತಂಗಿ ಜತ್ತಿಲೆ ನೀರಿಗೆ ಹೋಗಿ
ಜರ್ರಂತ ಜಾರಿಬಿತ್ತು ಸಿಗದೆ ಹೋತವ್ವ ಕೊಡ ||
ಶಿಶುನಾಳಧೀಶ ತಾನೆ ತಿದ್ದಿ ಮಾಡಿದ ಕೊಡ
ಬುದ್ಧಿವಂತರು ತಿಳಿದು ನೋಡಬೇಕಾದ ಕೊಡ ||
-ಶಿಶುನಾಳ ಶರೀಫ್